ನವದೆಹಲಿ, ಅ.21(Daijiworld News/SS): ಭಾರತೀಯ ಸೇನೆಯ ಮುಂಚೂಣಿ ನೆಲೆಗಳ ಮೇಲೆ ಪಾಕ್ ಸೇನೆ ಅಪ್ರಚೋದಿತ ಗುಂಡಿನ ದಾಳಿ ನಡೆಸಿತ್ತು. ದಾಳಿ ನಡೆದ ಕೆಲವೇ ಗಂಟೆಗಳಲ್ಲಿ ಭಾರತೀಯ ಸೇನೆ ಪ್ರತಿ ದಾಳಿ ನಡೆಸಿದ್ದು, ಕನಿಷ್ಠ 6 ರಿಂದ 10 ಯೋಧರನ್ನು ಹತ್ಯೆ ಮಾಡಲಾಗಿದೆ ಎಂದು ಸೇನಾ ಮುಖ್ಯಸ್ಥ ಬಿಪಿನ್ ರಾವತ್ ಹೇಳಿದ್ದಾರೆ.
ಗಡಿ ನಿಯಂತ್ರಣ ರೇಖೆ ಬಳಿ ಕದನ ವಿರಾಮ ಉಲ್ಲಂಘಿಸಿ ಗುಂಡಿನ ದಾಳಿ ನಡೆಸಿದ ಪಾಕಿಸ್ತಾನ ಯೋಧರಿಗೆ ಭಾರತ ತಕ್ಕ ಪ್ರತ್ಯುತ್ತರ ನೀಡಿದ್ದು, ಇದರ ಪರಿಣಾಮವಾಗಿ ಪಾಕಿಸ್ತಾನದ ಕನಿಷ್ಠ 6 ರಿಂದ 10 ಯೋಧರು ಮತ್ತು 10 ಉಗ್ರರ ಹತರಾಗಿದ್ದಾರೆ. ಪಾಕಿಸ್ತಾನ ಆಕ್ರಮಿತ ಕಾಶ್ಮೀರ(ಪಿಒಕೆ) ತಂಗ್ಧರ್ ಮತ್ತು ನೌಗಾಮ್'ನಲ್ಲಿ ಉಗ್ರರ ಕ್ಯಾಂಪ್'ಗಳು ಕಾರ್ಯನಿರ್ವಹಿಸುತ್ತಿರುವ ಬಗ್ಗೆ ನಮಗೆ ಮಾಹಿತಿ ಲಭ್ಯವಾಗಿತ್ತು. ಆ ಉಗ್ರರು ನುಸುಳುವುದಕ್ಕೆ ಸಹಾಯ ಮಾಡುವುದಕ್ಕಾಗಿ ಪಾಕಿಸ್ತಾನ ಕದನ ವಿರಾಮ ಉಲ್ಲಂಘಿಸಿ ಗುಂಡಿನ ದಾಳಿ ನಡೆಸಿದೆ ಎಂದು ಹೇಳಿದರು.
ಉಗ್ರರು ಗಡಿಯೊಳಗೆ ನುಸುಳಲು ಯತ್ನಿಸುತ್ತಿದ್ದಂತೆ ಭಾರತೀಯ ಸೇನೆ ಪಿಒಕೆಯ ನಾಲ್ಕು ಉಗ್ರರ ಕ್ಯಾಂಪ್'ಗಳ ಮೇಲೆ ದಾಳಿ ನಡೆಸಿದ್ದು, ದಾಳಿಯಲ್ಲಿ ಮೂರು ಉಗ್ರರ ಕ್ಯಾಂಪ್'ಗಳು ಧ್ವಂಸಗೊಂಡಿವೆ ಎಂದು ರಾವತ್ ಹೇಳಿದ್ದಾರೆ.