ಶ್ರೀನಗರ, ಅ.21(Daijiworld News/SS): ಭಾರತೀಯ ಸೇನೆ ನಡೆಸಿದ ಬೃಹತ್ ಫಿರಂಗಿ ದಾಳಿಯಲ್ಲಿ 20ಕ್ಕೂ ಹೆಚ್ಚು ಪಾಕ್ ಸೈನಿಕರು ಹಾಗೂ ಉಗ್ರರು ಮೃತಪಟ್ಟಿದ್ದಾರೆ. ಈ ಬೃಹತ್ ಕಾರ್ಯಾಚರಣೆಯಲ್ಲಿ ನಾಲ್ಕು ಉಗ್ರ ಶಿಬಿರಗಳು ಧ್ವಂಸಗೊಂಡಿದ್ದರೆ, 20ಕ್ಕೂ ಅಧಿಕ ಜನರು ಗಾಯಗೊಂಡಿರುವ ಶಂಕೆ ಇದೆ ಎನ್ನಲಾಗಿದೆ.
ಅ.19ರ ರಾತ್ರಿವರೆಗೂ ಪಾಕಿಸ್ತಾನಿ ಯೋಧರು ಗಡಿಯಲ್ಲಿ ಕದನ ವಿರಾಮ ಉಲ್ಲಂಘಿಸಿ ನಡೆಸುತ್ತಿದ್ದ ಗುಂಡಿನ ದಾಳಿಗೆ ಪ್ರತೀಕಾರವಾಗಿ ಪಾಕ್ ಆಕ್ರಮಿತ ಕಾಶ್ಮೀರದ ನೀಲಂ ಕಣಿವೆಯ ವ್ಯಾಪ್ತಿಯಲ್ಲಿ ಭಾರತೀಯ ಯೋಧರು ಅ.20 ಮುಂಜಾನೆ ಕಾರ್ಯಾಚರಣೆಗಿಳಿದರು. ನಿರಂತರವಾಗಿ ಫಿರಂಗಿ ದಾಳಿ ನಡೆಸಿದ ಪರಿಣಾಮ ನಾಲ್ಕು ಉಗ್ರರ ಶಿಬಿರಗಳು ಧ್ವಂಸಗೊಂಡವು. ಕಾರ್ಯಾಚರಣೆ ವೇಳೆ ಪಾಕ್ನ 6 ರಿಂದ 10 ಸೈನಿಕರು ಮತ್ತು 10ಕ್ಕೂ ಹೆಚ್ಚು ಉಗ್ರರು ಹತರಾಗಿದ್ದು, ಹಲವರು ಗಾಯಗೊಂಡಿದ್ದಾರೆ.
ಪಾಕ್ ಸೇನೆ ಉಗ್ರರ ನೆರವಿಗೆ ಬರುವ ಸಾಧ್ಯತೆ ಇರುವುದರಿಂದ ತಂಗ್ಧರ್ ವಲಯ ಸೇರಿ ಎಲ್ಒಸಿ ಉದ್ದಕ್ಕೂ ಕಟ್ಟೆಚ್ಚರವಹಿಸಲಾಗಿದೆ ಎಂದು ತಿಳಿದುಬಂದಿದೆ. ಮಾತ್ರವಲ್ಲ, ಪಾಕ್ ಸೈನಿಕರು ಹಾರಿಸಿದ ಗುಂಡಿನಿಂದ ನಮ್ಮ ಕಡೆಯ ಕೆಲವು ಗನ್ ಪಾಯಿಂಟ್'ಗಳಿಗೆ ಹಾನಿಯಾಗಿದೆ ಎಂದು ಸೇನಾ ಮೂಲಗಳು ತಿಳಿಸಿವೆ.