ನವದೆಹಲಿ, ಅ 22 (DaijiworldNews/SM): ಸೋಮವಾರದಂದು ನಡೆದ ಮಹಾರಾಷ್ಟ್ರ, ಹರಿಯಾಣ ವಿಧಾನಸಭೆ ಚುನಾವಣೆಗಳಲ್ಲಿ ಎರಡೂ ರಾಜ್ಯಗಳಲ್ಲಿ ಬಿಜೆಪಿ ಪಕ್ಷ ಭರ್ಜರಿ ಜಯಗಳಿಸಲಿದೆ ಎಂದು ಸಮೀಕ್ಷೆಗಳು ತಿಳಿಸುತ್ತಿವೆ.
ಚುನಾವಣೋತ್ತರ ಸಮೀಕ್ಷೆಯಿಂದ ಈ ವಿಚಾರ ಬಹಿರಂಗಗೊಂಡಿದೆ. ಈಗಾಗಲೇ ಹಲವು ಚುನಾವನೋತ್ತರ ಸಮೀಕ್ಷೆಗಳು ನಡೆದಿದ್ದು, ಎಲ್ಲರ ಅಭಿಪ್ರಾಯಗಳು ಬಿಜೆಪಿ ಪರವಾಗಿಯೇ ಬಂದಿವೆ. ಚುನಾವಣೆ ಮತದಾನದ ನಂತರ ಬಿಡುಗಡೆಯಾಗಿರುವ ಎಲ್ಲಾ ಪ್ರಮುಖ ಎಕ್ಸಿಟ್ ಪೋಲ್ ಸಮೀಕ್ಷೆಗಳಲ್ಲಿ ಇದೇ ಸ್ಪಷ್ಟಗೊಂಡಿದೆ.
ನಿನ್ನೆ ಮತದಾನ ಅಂತ್ಯವಾದ ಸಂದರ್ಭದಲ್ಲಿ ಮಹಾರಾಷ್ಟ್ರ ಮತ್ತು ಹರಿಯಾಣದಲ್ಲಿ ಕ್ರಮವಾಗಿ ಶೇ.60.05 ಹಾಗೂ ಶೇ. 65ರಷ್ಟು ಮತದಾನವಾಗಿದೆ.
ಪ್ರಮುಖ ಎಕ್ಸಿಟ್ ಪೋಲ್ ಸಮೀಕ್ಷೆ ಪ್ರಕಾರ ಹರಿಯಾಣದಲ್ಲಿ ಬಿಜೆಪಿ ಸರಾಸರಿ 75ರಿಂದ 80 ಸ್ಥಾನಗಳು, ಕಾಂಗ್ರೆಸ್ 9ರಿಂದ 11 ಸ್ಥಾನಗಳು ಹಾಗೂ ಇತರೆ 5ರಿಂದ 8 ಸ್ಥಾನಗಳನ್ನು ಪಡೆಯುವ ಬಗ್ಗೆ ಸಮೀಕ್ಷೆ ತಿಳಿಸಿದೆ.
ಇನ್ನು ಮಹಾರಾಷ್ಟ್ರದಲ್ಲಿ ಬಿಜೆಪಿ-ಶಿವಸೇನೆ ಸುಮಾರು 190ರಿಂದ 240, ಕಾಂಗ್ರೆಸ್ 40ರಿಂದ 90 ಹಾಗೂ ಇತರೆ 10ರಿಂದ 20 ಸ್ಥಾನಗಳನ್ನು ಪಡೆಯಲಿವೆ ಎಂದು ಸಮೀಕ್ಷೆಗಳು ತಿಳಿಸಿವೆ.
ಸದ್ಯ ಅಭ್ಯರ್ಥಿಗಳ ಭವಿಷ್ಯ ಮತಪೆಟ್ಟಿಗೆಯಲ್ಲಿ ಭದ್ರವಾಗಿದ್ದು, ಅಕ್ಟೋಬರ್ 24ರಂದು ಅಭ್ಯರ್ಥಿಗಳ ಭವಿಷ್ಯ ನಿರ್ಧಾರಗೊಳ್ಳಲಿದೆ.