ನವದೆಹಲಿ, ಅ.22(Daijiworld News/SS): ಅನರ್ಹ ಶಾಸಕರ ಪ್ರಕರಣದ ವಿಚಾರಣೆಯನ್ನು ಇಂದು ಸುಪ್ರೀಂಕೋರ್ಟ್ನ ನ್ಯಾ.ಎನ್.ವಿ.ರಮಣ ನೇತೃತ್ವದ ತ್ರಿಸದಸ್ಯ ನ್ಯಾಯಪೀಠ ಕೈಗೆತ್ತಿಕೊಳ್ಳಲಿದೆ.
ಕಾಂಗ್ರೆಸ್ ಪರ ವಕೀಲ ಕಪಿಲ್ ಸಿಬಲ್ ಅವರು, ಮಂಗಳವಾರ ವಾದ ಮಂಡಿಸಲು ತನಗೆ ಸಾಧ್ಯವಿಲ್ಲ. ಬುಧವಾರ ವಾದ ಮಂಡನೆಗೆ ಅವಕಾಶ ನೀಡಬೇಕು ಮತ್ತು ಮಂಗಳವಾರ ಯಾವುದೇ ವಿಚಾರಣೆ ಕೈಗೊಳ್ಳಬಾರದು ಎಂದು ನ್ಯಾಯಪೀಠಕ್ಕೆ ಅ.21ರಂದು ಬೆಳಗ್ಗೆ ಮನವಿ ಮಾಡಿದ್ದರು. ಇದಕ್ಕೆ ಸಮ್ಮತಿಸಿದ್ದ ನ್ಯಾಯಪೀಠ ವಿಚಾರಣೆಯನ್ನು ಅ.23ಕ್ಕೆ ಮುಂದೂಡಿತ್ತು.
ಆದರೆ ಇದಕ್ಕೆ ಅ.21ರಂದು ಮಧ್ಯಾಹ್ನವೇ ವಿರೋಧ ವ್ಯಕ್ತಪಡಿಸಿದ ಚುನಾವಣಾ ಆಯೋಗದ ಪರ ವಕೀಲ ರಾಕೇಶ್ ದ್ವಿವೇದಿ, ಪ್ರಕರಣಕ್ಕೆ ಸಂಬಂಧಿಸಿದಂತೆ ಕಾಂಗ್ರೆಸ್ ಕರ್ನಾಟಕ ಹೈಕೋರ್ಟ್ನಲ್ಲಿ ರಿಟ್ ಅರ್ಜಿ ಸಲ್ಲಿಸಿದೆ. ಇಲ್ಲಿ ವಿಚಾರಣೆ ಮುಂದೂಡುವುದು ಬೇಡ ಎಂದು ನ್ಯಾಯಪೀಠಕ್ಕೆ ವಿವರಿಸಿದರು. ವಿಚಾರಣೆ ಮುಂದೂಡಿಕೆ ಆದೇಶ ಹಿಂಪಡೆದ ನ್ಯಾಯಪೀಠ, ಮಂಗಳವಾರಕ್ಕೆ ಮರು ನಿಗದಿ ಮಾಡಿದೆ.