ಬೆಂಗಳೂರು, ಅ.22(Daijiworld News/SS): ಈಗಾಗಲೇ ದ್ವಿತೀಯ ಪಿಯುಸಿ ಪರೀಕ್ಷೆಯ ತಾತ್ಕಾಲಿಕ ವೇಳಾಪಟ್ಟಿಯನ್ನು ಪ್ರಕಟಿಸಲಾಗಿದೆ. ಮಾರ್ಚ್ 4 ರಿಂದ 19 ತನಕ ಈ ಬಾರಿಯ ಪರೀಕ್ಷೆಗಳು ನಡೆಯಲಿವೆ. ಇದೀಗ ಕರ್ನಾಟಕ ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿ ಈ ಬಾರಿಯ ಎಸ್ಎಸ್ಎಲ್ಸಿ ಪರೀಕ್ಷೆಯ ತಾತ್ಕಾಲಿಕ ವೇಳಾಪಟ್ಟಿ ಪ್ರಕಟಿಸಿದೆ.
2020ರ ಮಾರ್ಚ್ 20ರಿಂದ ಏಪ್ರಿಲ್ 3ರ ತನಕ ಪರೀಕ್ಷೆಗಳನ್ನು ನಡೆಸಲು ತೀರ್ಮಾನಿಸಲಾಗಿದೆ. ತಾತ್ಕಾಲಿಕ ವೇಳಾಪಟ್ಟಿ ಅನ್ವಯ ಮಾರ್ಚ್ 20ರಂದು ಪ್ರಥಮ ಭಾಷೆ, 21ರಂದು ಅರ್ಥಶಾಸ್ತ್ರ ಇತರ ಕೋರ್ ವಿಷಯಗಳ ಪರೀಕ್ಷೆಗಳು ನಡೆಯಲಿವೆ.
ಮಾರ್ಚ್ 22ರಂದು ಭಾನುವಾರವಾಗಿದ್ದು ಯಾವುದೇ ಪರೀಕ್ಷೆ ಇಲ್ಲ. ಮಾರ್ಚ್ 23ರಂದು ಸಮಾಜ ವಿಜ್ಞಾನ, 26ರಂದು ವಿಜ್ಞಾನ, ರಾಜ್ಯ ಶಾಸ್ತ್ರ, ಕರ್ನಾಟಕ ಸಂಗೀತ/ಹಿಂದೂಸ್ತಾನಿ ಸಂಗೀತ ಪರೀಕ್ಷೆ ನಡೆಯಲಿದೆ. ಮಾರ್ಚ್ 30ರಂದು ಗಣಿತ, ಏಪ್ರಿಲ್ 1ರಂದು ದ್ವಿತೀಯ ಭಾಷೆ, ಏಪ್ರಿಲ್ 3ರಂದು ತೃತೀಯ ಭಾಷೆ, ಎನ್ಎಸ್ಕ್ಯೂಎಫ್ ಪರೀಕ್ಷೆಗಳು ನಡೆಯಲಿವೆ.
ಪ್ರಥಮ ಭಾಷೆಗೆ ಗರಿಷ್ಠ 100 ಅಂಕ, ಉಳಿದ ವಿಷಯಗಳಿಗೆ ಗರಿಷ್ಠ 80 ಅಂಕಗಳಂತೆ ಪರೀಕ್ಷೆ ನಡೆಯಲಿದೆ. ಆದರೆ, ಸಿಸಿಇ ಖಾಸಗಿ, ಪುನರಾವರ್ತಿತ ಮತ್ತಿತರ ಅಭ್ಯರ್ಥಿಗಳಿಗೆ ಮಾತ್ರ ಪ್ರಥಮ ಭಾಷೆಗೆ 125, ಇತರ ವಿಷಯಗಳಿಗೆ 100 ಅಂಕಗಳಂತೆ ಪರೀಕ್ಷೆ ನಡೆಯಲಿದೆ.
ನವೆಂಬರ್ 19ರೊಳಗೆ ಆಕ್ಷೇಪಣೆಗಳನ್ನು ಸಲ್ಲಿಸಲು ಅವಕಾಶ ಕಲ್ಪಿಸಲಾಗಿದೆ. ವೇಳಾಪಟ್ಟಿಗೆ ಆಕ್ಷೇಪಣೆಗಳಿದ್ದರೆ ಬೆಂಗಳೂರಿನ ಮಲ್ಲೇಶ್ವರದಲ್ಲಿರುವ ಕಚೇರಿಗೆ ಸಲ್ಲಿಸಲು ಪ್ರಕಟಣೆಯಲ್ಲಿ ತಿಳಿಸಲಾಗಿದೆ.