ಬೆಂಗಳೂರು, ಅ 22 (Daijiworld News/MSP):ಶುದ್ದ ಕುಂಕುಮದ ಬದಲು ಈಗೆಲ್ಲಾ ಮಾರುಕಟ್ಟೆಯಲ್ಲಿ ಸಿಗುವುದು ರಾಸಾಯನಿಕ ಮಿಶ್ರಿತ ಕುಂಕುಮ. ಈ ನಡುವೆ ದೇವಸ್ಥಾನದಲ್ಲೂ ರಾಸಾಯನಿಕ ಮಿಶ್ರಿತ ಕುಂಕುಮ ಕಂಡು ಬರುತ್ತಿರುವುದರಿಂದ ಇದಕ್ಕೆ ಬ್ರೇಕ್ ಹಾಕಲು ಮುಜರಾಯಿ ಇಲಾಖೆ ಮುಂದಾಗಿದೆ.
ಮುಜರಾಯಿ ಇಲಾಖೆಯ ದೇಗುಲದಲ್ಲಿ ನೈಸರ್ಗಿಕ ಕುಂಕುಮ, ಶ್ರೀಗಂಧ ಬಳಸುವಂತೆ ರಾಜ್ಯ ಸರಕಾರ ಸೂಚನೆ ನೀಡಿದೆ. ಇಲಾಖೆ ವ್ಯಾಪ್ತಿಯ ಕೆಲವು ದೇಗುಲಗಳಲ್ಲಿ ಕಲಬೆರಕೆ ಇಲ್ಲವೇ ರಾಸಾಯನಿಕ ಮಿಶ್ರಿತ ಕುಂಕುಮ ಬಳಸುತ್ತಿರುವ ಬಗ್ಗೆ ಭಕ್ತರಿಂದ ವ್ಯಾಪಕ ದೂರುಗಳು ಬಂದ ಹಿನ್ನೆಲೆಯಲ್ಲಿ ಸರಕಾರ ಈ ಕ್ರಮಕ್ಕೆ ಮುಂದಾಗಿದೆ.
ಶುದ್ಧ ನೈಸರ್ಗಿಕವಾದ ಗಂಧ, ಕುಂಕುಮವನ್ನು ದೇವರ ಅರ್ಚನೆಗೆ ಬಳಸಬೇಕು. ಹಾಗೂ ಭಕ್ತರಿಗೂ ಇದನ್ನೇ ನೀಡಬೇಕು ಎಂದು ನಿರ್ದೇಶಿಸಲಾಗಿದೆ. ಈ ಬಗ್ಗೆ ಶೀಘ್ರದಲ್ಲೆ ಅಧಿಕೃತ ಆದೇಶ ಹೊರಡಿಸಲಾಗುವುದು ಎಂದು ಮುಜರಾಯಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ತಿಳಿಸಿದ್ದಾರೆ.
ಮುಜರಾಯಿ ಇಲಾಖೆ ವ್ಯಾಪ್ತಿಯಲ್ಲಿ 36 ಸಾವಿರ ದೇವಸ್ಥಾನಗಳಿವೆ. ಈ ಪೈಕಿ 15 ಸಾವಿರ ದೇಗುಲಗಳಿಗೆ ಉತ್ತಮ ಆದಾಯವಿದೆ. ಇಂತಹ ಪ್ರತಿಷ್ಠಿತ ದೇಗುಲಗಳಿಗೆ ಭಕ್ತಾದಿಗಳೂ ಅತಿ ಹೆಚ್ಚಿನ ಸಂಖ್ಯೆಯಲ್ಲಿ ಭೇಟಿ ನೀಡುತ್ತಾರೆ. ರಾಸಾಯನಿಕ ಮಿಶ್ರಿತ ಕುಂಕುಮ ಬಳಕೆಯಿಂದ ಚರ್ಮಕ್ಕೆ ಸಂಬಂಧಪಟ್ಟಂತೆ ಅಲರ್ಜಿ ಉಂಟಾಗುವ ಸಾಧ್ಯತೆ ಇದೆ. ಹೀಗಾಗಿ ಭಕ್ತರ ಹಿತದೃಷ್ಟಿಯಿಂದ ಈ ಕ್ರಮ ಕೈಗೊಳ್ಳಲಾಗಿದೆ ಎಂದು ಸಚಿವರು ಹೇಳಿದ್ದಾರೆ.