ಬೆಂಗಳೂರು, ಅ.22(Daijiworld News/SS): ಮುಂದಿನ ಚುನಾವಣೆ ಸಂದರ್ಭದಲ್ಲಿ ವಿ.ಡಿ.ಸಾವರ್ಕರ್ ಬಗ್ಗೆ ಮಾತನಾಡೋಣ. ಈಗ ತುರ್ತಾಗಿ ನಿರುದ್ಯೋಗ, ಬೆಲೆ ಏರಿಕೆ, ದಿವಾಳಿಯಾಗುತ್ತಿರುವ ಬ್ಯಾಂಕ್ಗಳು, ರೈತರ ಕಷ್ಟಗಳು, ನೆರೆ-ಬರದ ಬಗ್ಗೆ ಚರ್ಚೆ ಮಾಡೋಣ ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ವ್ಯಂಗ್ಯವಾಡಿದ್ದಾರೆ.
ಮಹಾರಾಷ್ಟ್ರ ಚುನಾವಣೆ ಮುಗಿದಿರುವುದರಿಂದ ಬಿಜೆಪಿ ನಾಯಕರು ವಿ.ಡಿ.ಸಾವರ್ಕರ್ ಬಗ್ಗೆ ಮಾತನಾಡುವುದನ್ನು ಬಿಟ್ಟು ಈಗಲಾದರೂ ರಾಜ್ಯ ಹಾಗೂ ದೇಶದಲ್ಲಿನ ಸಮಸ್ಯೆಗಳ ನಿವಾರಣೆ ಮತ್ತು ಅಭಿವೃದ್ಧಿಯ ಬಗ್ಗೆ ಗಮನ ಹರಿಸಲಿ ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಬಿಜೆಪಿ ನಾಯಕರನ್ನು ಕುಟುಕಿದ್ದಾರೆ. ಮಹಾರಾಷ್ಟ್ರ ಚುನಾವಣೆ ಗೆಲ್ಲಲು ಬಿಜೆಪಿ ವಿ.ಡಿ.ಸಾವರ್ಕರ್'ಗೆ ಭಾರತರತ್ನ ಕೊಡುವುದಾಗಿ ಕಾರ್ಯಸೂಚಿ ರೂಪಿಸಿತ್ತು. ಈ ವಿಚಾರವಾಗಿ ಕಾಂಗ್ರೆಸ್ ಹಾಗೂ ಬಿಜೆಪಿ ನಡುವೆ ವಾಕ್, ಟ್ವೀಟ್ ಸಮರವೂ ಜೋರಾಗಿ ನಡೆದಿತ್ತು. ಇದೀಗ ಚುನಾವಣೆ ಮುಗಿದಿದ್ದು, ಈಗಲಾದರೂ ಸಾವರ್ಕರ್ ವಿಚಾರ ಹಿಂದೆ ಸರಿಯಲಿ ಎಂದು ಸಿದ್ದರಾಮಯ್ಯ ಹೇಳಿದ್ದಾರೆ.
ದೇಶದ ಜನರು ಇವಿಎಂ ಬಗ್ಗೆ ಅನುಮಾನ ವ್ಯಕ್ತಪಡಿಸುತ್ತಿದ್ದಾರೆ. ಆದರೂ ಚುನಾವಣಾ ಆಯೋಗ ಇವಿಎಂ ಅನ್ನೇ ಏಕೆ ಬಳಸುತ್ತಿದೆ..? ಬಿಜೆಪಿ ತಮಗೆ ಗೆಲ್ಲಲು ಎಷ್ಟು ಬೇಕೋ ಅಷ್ಟು ಇವಿಎಂಗಳನ್ನು ದುರ್ಬಳಕೆ ಮಾಡಿಕೊಳ್ಳುತ್ತದೆ. ಎಲ್ಲಾ ಬೂತ್'ಗಳಲ್ಲಿ ಅವರು ಇವಿಎಂ ದುರ್ಬಳಕೆ ಮಾಡಿಕೊಳ್ಳುವುದಿಲ್ಲ. ಆಯ್ದ ಭಾಗಗಳಲ್ಲಿ ಮಾತ್ರ ಇವಿಎಂ ಅನ್ನು ಸೆಟ್ ಮಾಡಿಕೊಳ್ಳುತ್ತಿದೆ ಎಂದು ಆರೋಪಿಸಿದರು.