ಬೆಂಗಳೂರು, ಅ 22 (DaijiworldNews/SM): ರಾಜ್ಯದ ಹಲವೆಡೆ ಮತ್ತೆ ಭಾರೀ ಮಳೆಯಾಗುತ್ತಿದೆ. ಇದರಿಂದಾಗಿ ಮತ್ತೆ ಪ್ರವಾಹದ ಭೀತಿ ಎದುರಾಗಿದೆ. ನೆರೆ ಸಂಕಷ್ಟಕ್ಕೆ ಸಿಲುಕಿರುವ ಜನರಿಗೆ ನೆರವಾಗಲು ಜಿಲ್ಲಾಧಿಕಾರಿಗಳು ಹಾಗೂ ಇತರ ಅಧಿಕಾರಿಗಳಿಗೆ ಸಿಎಂ ಬಿ.ಎಸ್. ಯಡಿಯೂರಪ್ಪ ತಿಳಿಸಿದ್ದಾರೆ.
ಇನ್ನು ಈಗಾಗಲೇ ರಾಜ್ಯ ಪ್ರವಾಹದಿಂದ ತತ್ತರಿಸಿದೆ. ಈ ನಡುವೆ ಮತ್ತೆ ಭಾರೀ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಎಚ್ಚರಿಕೆ ನೀಡಿರುವ ಹಿನ್ನೆಲೆಯಲ್ಲಿ ಮುನ್ನೆಚ್ಚರಿಕೆ ವಹಿಸುವಂತೆ ಮುಖ್ಯಮಂತ್ರಿ ಬಿಎಸ್ ವೈ ತಿಳಿಸಿದ್ದಾರೆ. ಹಾಗೂ ಸಾರ್ವಜನಿಕರಿಗೆ ಯಾವುದೇ ಕಾರಣಕ್ಕೆ ತೊಂದರೆಯಾಗದಂತೆ ಕ್ರಮ ವಹಿಸಬೇಕೆಂದು ಅಧಿಕಾರಿಗಳಿಗೆ ತಿಳಿಸಿದ್ದಾರೆ.
ಹವಾಮಾನ ಇಲಾಖೆ ಅಧಿಕಾರಿಗಳು ಹೆಚ್ಚಿನ ಮಳೆಯಾಗಬಹುದೆಂದು ಸೂಚನೆ ನೀಡಿರುವ ಕಾರಣ ತಗ್ಗುಪ್ರದೇಶಗಳಲ್ಲಿರುವ ಸಾರ್ವಜನಿಕರನ್ನು ಕಾಳಜಿ ಕೇಂದ್ರಕ್ಕೆ ಸ್ಥಳಾಂತರಿಸುವಂತೆ ತಿಳಿಸಿದ್ದಾರೆ. ಮಳೆಯಿಂದ ಅನಾಹುತ ಸಂಭವಿಸಿದ ಪ್ರದೇಶಗಳಲ್ಲಿ ದಿನದ 24 ಗಂಟೆಯೂ ಅಧಿಕಾರಿಗಳು ಕಾರ್ಯನಿರ್ವಹಿಸಬೇಕು. ಕಾಳಜಿ ಕೇಂದ್ರದಲ್ಲಿ ಮೂಲಭೂತ ಸೌಕರ್ಯಗಳು ಸೇರಿದಂತೆ ಅಗತ್ಯ ತುರ್ತು ಸೇವೆಗಳನ್ನು ಕೈಗೊಳ್ಳುವಂತೆ ಮುಖ್ಯಮಂತ್ರಿ ನಿರ್ದೇಶನ ನೀಡಿದ್ದಾರೆ.
ಅಗತ್ಯವಿರುವೆಡೆ ಎನ್ಡಿಆರ್ಎಫ್, ಎಸ್ಡಿಆರ್ಎಫ್, ಅಗ್ನಿಶಾಮಕ ಮತ್ತು ತುರ್ತು ಸೇವೆ, ಸಂಘ-ಸಂಸ್ಥೆಗಳ ಜೊತೆ ಕೈಜೋಡಿಸಿ ಸಂತ್ರಸ್ತರಿಗೆ ನೆರವು ಒದಗಿಸುವಂತೆ ಹಾಗೂ ಹೆಚ್ಚು ಮಳೆಯಾಗುತ್ತಿರುವ ಪ್ರದೇಶಗಳಿಗೆ ಸಾರ್ವಜನಿಕರು ತೆರಳದಂತೆ ಸೂಚನೆ ನೀಡಬೇಕೆಂದು ಯಡಿಯೂರಪ್ಪ ಹೇಳಿದ್ದಾರೆ.