ಬೆಂಗಳೂರು, ಅ.23(Daijiworld News/SS): ಪ್ರಾದೇಶಿಕ ಆರ್ಥಿಕದಡಿಯಲ್ಲಿ ನಡೆಯಲಿರುವ ಮುಕ್ತ ವ್ಯಾಪಾರ ಒಪ್ಪಂದ ದೇಶದ ಕೃಷಿ ಕ್ಷೇತ್ರಕ್ಕೆ ಮಾರಕವಾಗಲಿದೆ. ಕೇಂದ್ರ ಸರ್ಕಾರದ ಈ ಪ್ರಯತ್ನ ರೈತರ ಪಾಲಿನ ಮರಣ ಶಾಸನ ಎಂದು ಮಾಜಿ ಸಿ.ಎಂ ಹಾಗೂ ಪ್ರತಿ ಪಕ್ಷ ನಾಯಕ ಸಿದ್ದರಾಮಯ್ಯ ಕೇಂದ್ರದ ವಿರುದ್ದ ಕಿಡಿಕಾರಿದ್ದಾರೆ.
10 ಕೋಟಿ ರೈತರ ಬದುಕು ಹೈನುಗಾರಿಕೆಯನ್ನು ಅವಲಂಬಿಸಿದೆ. ಕರ್ನಾಟಕದಲ್ಲಿಯೇ ಸುಮಾರು 86 ಲಕ್ಷ ಲೀಟರ್ ಹಾಲು ಉತ್ಪಾದನೆಯಾಗುತ್ತಿದೆ. ನ್ಯೂಜಿಲೆಂಡ್, ಆಸ್ಟ್ರೇಲಿಯಾದಂತಹ ದೇಶಗಳಿಂದ ಅಗ್ಗದ ದರದ ಹಾಲು ಆಮದಿಗೆ ಅವಕಾಶ ನೀಡುವ ಆರ್.ಸಿ.ಇ.ಪಿ ನಮ್ಮ ರೈತರನ್ನು ಬೀದಿ ಪಾಲು ಮಾಡಲಿದೆ ಎಂದು ಹೇಳಿದ್ದಾರೆ.
ಸೋನಿಯಾ ಗಾಂಧಿಯವರು ಎಫ್.ಟಿ.ಎ ವಿರೋಧಿಸಲು ಕರೆ ನೀಡಿರುವುದನ್ನು ಸ್ವಾಗತಿಸುತ್ತೇನೆ. ನಮ್ಮ ಪಕ್ಷದ ಪ್ರತಿಯೊಬ್ಬ ಕಾರ್ಯಕರ್ತನೂ ಬಿಜೆಪಿ ಸರ್ಕಾರದ ರೈತ ವಿರೋಧಿ ಒಪ್ಪಂದದ ಹೋರಾಟದಲ್ಲಿ ತಮ್ಮನ್ನು ತೊಡಗಿಸಿಕೊಳ್ಳಬೇಕೆಂದು ಪಕ್ಷದ ಕಾರ್ಯಕರ್ತರಿಗೆ ಸೂಚಿದ್ದಾರೆ.
ಆರ್.ಸಿ.ಇ.ಪಿ ಮಾತುಕತೆಯಲ್ಲಿ ಯುಪಿಎ ಸರ್ಕಾರ ಭಾಗಿಯಾಗಿದ್ದು ನಿಜ. ಆಗಿನ ಪ್ರಧಾನಿ ಮನಮೋಹನ್ ಸಿಂಗ್ ಅವರು ದೇಶದ ರೈತರ ಹಿತ ಕಾಪಾಡಲು ಕೆಲವು ಬದಲಾವಣೆಗಳನ್ನು ಬಯಸಿದ್ದರು. ಆದರೆ ನರೇಂದ್ರ ಮೋದಿ ಅವರು ಇಡೀ ದೇಶವನ್ನು ಕತ್ತಲಲ್ಲಿಟ್ಟು ಈ ಒಪ್ಪಂದಕ್ಕೆ ಸಹಿ ಹಾಕಲು ಹೊರಟಿದ್ದಾರೆ. ಎಲ್ಲಿದೆ ಪಾರದರ್ಶಕತೆ ಎಂದು ಪ್ರಶ್ನಿಸಿದ್ದಾರೆ.