ನವದೆಹಲಿ, ಅ.24(Daijiworld News/SS): ಅನರ್ಹ ಶಾಸಕರ ರಾಜೀನಾಮೆ ಪ್ರಕರಣವನ್ನು ಸಾಂವಿಧಾನಿಕ ನ್ಯಾಯಪೀಠಕ್ಕೆ ವರ್ಗಾಯಿಸಬೇಕು ಎಂದು ಕಾಂಗ್ರೆಸ್-ಜೆಡಿಎಸ್ ಪರ ವಕೀಲರಾದ ಕಪಿಲ್ ಸಿಬಲ್ ಮತ್ತು ರಾಜೀವ್ ಧವನ್ ಸುಪ್ರೀಂಕೋರ್ಟ್ ಅನ್ನು ಒತ್ತಾಯಿಸಿದ್ದಾರೆ.
ನ್ಯಾಯಮೂರ್ತಿ ಎನ್. ವಿ.ರಮಣ ನೇತೃತ್ವದ ತ್ರಿಸದಸ್ಯ ಪೀಠ, ಈ ಬಗ್ಗೆ ಸದ್ಯಕ್ಕೆ ಯಾವುದೇ ಅಭಿಪ್ರಾಯ ನೀಡುವುದಿಲ್ಲ. ನಾವೇ ವಿಚಾರಣೆ ನಡೆಸುತ್ತೇವೆ. ಸಾಂವಿಧಾನಿಕ ಪೀಠಕ್ಕೆ ವರ್ಗಾವಣೆ ಮಾಡುವ ವಿಷಯದ ಬಗ್ಗೆ ಆಮೇಲೆ ನೋಡೋಣ. ಸದ್ಯ ಪ್ರಕರಣದ ಬಗ್ಗೆ ಚರ್ಚೆಯಾಗಲಿ ಎಂದು ಹೇಳಿದೆ.
ಅನರ್ಹ ಶಾಸಕರು ಪ್ರಕರಣ ಇಲ್ಲೇ ಇತ್ಯರ್ಥವಾಗಬೇಕು ಎಂದು ವಾದಿಸಿದ್ದು, ಇದು ಸ್ಪೀಕರ್ ತೀರ್ಮಾನ ಪ್ರಶ್ನಿಸಿ ಸಲ್ಲಿಸಲಾಗಿರುವ ಅರ್ಜಿಯಷ್ಟೇ. ಹೀಗಾಗಿ ನೀವೇ ಈ ಬಗ್ಗೆ ನಿರ್ಧಾರ ಕೈಗೊಳ್ಳಿ ಎಂದು ನ್ಯಾಯಪೀಠಕ್ಕೆ ತಿಳಿಸಿದ್ದಾರೆ.
ಅನರ್ಹರ ಪರ ಹಿರಿಯ ವಕೀಲ ಮುಕುಲ್ ರೋಹಟ್ಗಿ, ಶಾಸಕರನ್ನು ಅನರ್ಹಗೊಳಿಸಿದರೂ 2023ರ ತನಕ ಅನರ್ಹತೆಯ ಅವಧಿ ಇರಲು ಸಾಧ್ಯವೇ ಇಲ್ಲ. ಚುನಾವಣಾ ಘೊಷಣೆಯಾದ ಕೂಡಲೇ ಅನರ್ಹತೆ ಅನೂರ್ಜಿತಗೊಳ್ಳುತ್ತದೆ ಮತ್ತು ಚುನಾವಣೆಯಲ್ಲಿ ಸ್ಪರ್ಧಿಸುವ ಅವಕಾಶ ಪ್ರಾಪ್ತಿಯಾಗುತ್ತದೆ. ರಾಜೀನಾಮೆಗೆ ಕಾರಣವಾದ ಘಟನೆಗಳನ್ನು ಆಧರಿಸಿ ಸ್ಪೀಕರ್ ತೀರ್ವನಕ್ಕೆ ಬರುವಂತಿಲ್ಲ. ಶಾಸಕ ರಾಜೀನಾಮೆ ನೀಡಿ ಮತ್ತೆ ಚುನಾವಣೆ ಎದುರಿಸುವ ಧೈರ್ಯ ತೋರಿಸಿದರೆ ಅದಕ್ಕೆ ಅವಕಾಶ ಇರಬೇಕು ಎಂದು ಹೇಳಿದರು.
ಇದಕ್ಕೆ ಪ್ರತಿಕ್ರಿಯಿಸಿದ ನ್ಯಾಯಪೀಠ, 2023ರ ತನಕ ಅನರ್ಹತೆ ಅವಧಿ ಇರುತ್ತದೆಯೇ ಇಲ್ಲವೇ ಎಂಬ ಪ್ರಮುಖ ಅಂಶವೂ ನಮ್ಮ ಮುಂದಿದೆ. ಇದನ್ನು ಇತ್ಯರ್ಥಪಡಿಸಬೇಕಿದೆ. ಈ ಬಗ್ಗೆ ಪ್ರತಿವಾದಿ ವಕೀಲರೂ ವಾದ ಮಂಡಿಸಬೇಕು ಎಂದು ತಿಳಿಸಿತು.
ಪ್ರಕರಣದ ವಿಚಾರಣೆ ಕೈಗೆತ್ತೆಕೊಂಡಿರುವ ಸುಪ್ರೀಂ ಕೋರ್ಟ್ ವಿಚಾರಣೆಯನ್ನು ಗುರುವಾರಕ್ಕೆ ಪೂರ್ಣಗೊಳಿಸುವ ಗುರಿ ಹೊಂದಿದ್ದರೂ, ಗುರುವಾರವೇ ತೀರ್ಪು ನೀಡಲಿದೆಯೇ ಅಥವಾ ಸಾಂವಿಧಾನಿಕ ಪೀಠಕ್ಕೆ ವರ್ಗಾಯಿಸುವುದೇ ಎಮಬುವುದನ್ನು ಕಾದು ನೋಡಬೇಕಿದೆ.