ಬೆಂಗಳೂರು, ಅ.24(Daijiworld News/SS): ಇದೀಗ ಉತ್ತರ ಕರ್ನಾಟಕ ಭಾಗದಲ್ಲಿ ಸುರಿಯುತ್ತಿರುವ ಮಳೆ ಮತ್ತೆ ಜನತೆಯನ್ನು ಆತಂಕಕ್ಕೀಡು ಮಾಡಿದೆ. ಬೆಳಗಾವಿ ಜಿಲ್ಲೆಯಲ್ಲಿ ಮೂರನೇ ದಿನವೂ ವರುಣನ ಆರ್ಭಟ ಜೋರಾಗಿದ್ದು, ನದಿ ಪಾತ್ರದ ಹಳ್ಳಿಗಳಲ್ಲಿ ಮತ್ತೊಮ್ಮೆ ನೆರೆ ಆತಂಕ ಆವರಿಸಿದೆ.
ಜಿಲ್ಲೆಯ ಕೃಷ್ಣಾ, ಮಲಪ್ರಭಾ ಹಾಗೂ ಘಟಪ್ರಭಾ ನದಿಗಳು ಅಪಾಯದ ಮಟ್ಟ ಮೀರಿ ಹರಿಯುತ್ತಿದ್ದು, ಒಳ ಹರಿವಿನ ಪ್ರಮಾಣದಷ್ಟೇ ನೀರನ್ನು ಜಲಾಶಯಗಳಿಂದ ಹೊರಬಿಡಲಾಗುತ್ತಿದೆ. ಗೋಕಾಕ ತಾಲೂಕಿನ ಕೆಲ ಹಳ್ಳಿಗಳ ಕೆಳ ಹಂತದ ಸೇತುವೆಗಳು, ಚಿಕ್ಕೋಡಿ ತಾಲೂಕಿನ ಏಳು, ರಾಯಬಾಗ ತಾಲೂಕಿನ ಕುಡಚಿ, ಚಿಂಚಲಿ ಸೇತುವೆಗಳು ಸಂಪೂರ್ಣ ಮುಳುಗಡೆಯಾಗಿವೆ ಎನ್ನಲಾಗಿದೆ.
ಈ ನಡುವೆ ನೆರೆ ಸಂತ್ರಸ್ತರಿಗೆ ಪುನರ್ವಸತಿ, ಪುನರ್ ನಿರ್ಮಾಣ ಕಾರ್ಯಗಳಿಗೆ ಸರ್ಕಾರದೊಂದಿಗೆ ಕೈಜೋಡಿಸುವಂತೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಸಾರ್ವಜನಿಕರಲ್ಲಿ ಮನವಿ ಮಾಡಿದ್ದಾರೆ. ಹದಿನೈದು ಜಿಲ್ಲೆಗಳ ಜನ ಸಂಕಷ್ಟಕ್ಕೀಡಾಗಿದ್ದು, ಅಪಾರ ಆಸ್ತಿ-ಪಾಸಿ ಹಾನಿಯಾಗಿದೆ. ಸಾರ್ವಜನಿಕರ ದೇಣಿಗೆಯನ್ನು ಜೀವಸಂಕುಲದ ಉಳಿವಿಗೆ ತಮ್ಮ ಸೇವೆ ಎಂದು ಪರಿಗಣಿಸಲಾಗುವುದು ಎಂದು ಹೇಳಿದ್ದಾರೆ.