ಬೆಂಗಳೂರು, ಅ.24(Daijiworld News/SS): ರಾಜ್ಯ ಸರ್ಕಾರದ ಇಲಾಖೆಗಳ ಪೈಕಿ ಅತಿ ದೊಡ್ಡದಾದ ಶಿಕ್ಷಣ ಇಲಾಖೆಯಲ್ಲಿ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ, ಉನ್ನತ ಶಿಕ್ಷಣ ವಿಭಾಗಗಳಲ್ಲಿ ಸಿಬ್ಬಂದಿ ಕೊರತೆ ತೀವ್ರವಾಗಿ ಕಾಡುತ್ತಿದೆ.
ಸದ್ಯ ಮಂಜೂರಾಗಿರುವ 3,54,862 ಹುದ್ದೆಗಳ ಪೈಕಿ 2,83,464 ಭರ್ತಿಯಾಗಿವೆ. ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಇಲಾಖೆಯೊಂದರಲ್ಲೇ 3,03,275 ಹುದ್ದೆ ಮಂಜೂರಾಗಿದ್ದು, 2,54,196 ಭರ್ತಿಯಾಗಿ 49,079 ಹುದ್ದೆ ಖಾಲಿ ಉಳಿದಿವೆ. ಪ್ರಾಥಮಿಕ ಮತ್ತು ಪ್ರೌಢ, ಪದವಿಪೂರ್ವ, ಕಾಲೇಜು ಶಿಕ್ಷಣ ಇಲಾಖೆಯಲ್ಲಿ ಅಲ್ಪಮಟ್ಟಿಗೆ ಹುದ್ದೆಗಳು ಭರ್ತಿಯಾಗುತ್ತಿದ್ದು, ಉನ್ನತ, ತಾಂತ್ರಿಕ ಹಾಗೂ ವೈದ್ಯಕೀಯ ಶಿಕ್ಷಣದಲ್ಲಿ ನೇಮಕಾತಿ ಪ್ರಕ್ರಿಯೆ ತುಂಬಾ ವಿರಳವಾಗಿದೆ ಎಂಬ ಮಾಹಿತಿ ಲಭ್ಯವಾಗಿದೆ.
ಶಿಕ್ಷಣ ಇಲಾಖೆಯಲ್ಲೇ ಬರೋಬ್ಬರಿ 71 ಸಾವಿರ ಹುದ್ದೆಗಳು ಭರ್ತಿಯಾಗದೆ ಉಳಿದಿರುವುದು ವಿದ್ಯಾರ್ಥಿಗಳ ಪಾಲಿಗೆ ಕಂಟಕವಾಗಿ ಪರಿಣಮಿಸಿದೆ.