ಮಹಾರಾಷ್ಟ್ರ, ಅ 24 (DaijiworldNews/SM): ನೆರೆ ಪರಿಹಾರ ವಿತರಿಸಿದ ಪರಿಣಾಮ ಮಹಾರಾಷ್ಟ್ರದ ಮತದಾರರು ಬಿಜೆಪಿ ಪಕ್ಷಕ್ಕೆ ಪಾಠ ಕಲಿಸಿದ್ದಾರೆ. ಮಹಾರಾಷ್ಟ್ರದ ಎರಡು ಜಿಲ್ಲೆಗಳಲ್ಲಿ ಬಿಜೆಪಿಗೆ ತೀವ್ರವಾದ ಮುಖಭಂಗವಾಗಿದೆ.
ಕರ್ನಾಟಕ - ಮಹಾರಾಷ್ಟ್ರ ಗಡಿಭಾಗಗಳಲ್ಲಿ ವಿಪರೀತ ಪ್ರವಾಹದಿಂದ ಜನತೆ ಕಂಗೆಟ್ಟಿದ್ದರು. ಎರಡೂ ರಾಜ್ಯಗಳು ಪ್ರವಾಹವನ್ನು ಸಮರ್ಪಕವಾಗಿ ಎದುರಿಸಿಲ್ಲ ಎಂಬ ಆರೋಪಗಳು ವ್ಯಾಪಕವಾಗಿ ಕೇಳಿ ಬಂದಿದ್ದವು. ಮಹಾರಾಷ್ಟ್ರದ ಸಾಂಗ್ಲಿ ಹಾಗೂ ಕೊಲ್ಲಾಪುರ ಜಿಲ್ಲೆಗೆ ಪ್ರವಾಹದಲ್ಲಿ ಹೆಚ್ಚಿನ ಪ್ರಮಾಣದಲ್ಲಿ ನಷ್ಟ ಉಂಟಾಗಿತ್ತು. ಇದರಿಂದಾಗಿ ಸಾವಿರಾರು ಜನ ನಿರಾಶ್ರಿತರಾಗಿದ್ದರು. ಈ ಜಿಲ್ಲೆಗಳಲ್ಲಿ ಬಿಜೆಪಿ ಪರಿಹಾರ ವಿತರಿಸುವಲ್ಲಿ ವಿಫಲವಾಗಿದೆ ಎಂಬ ಆರೋಪ ಕೇಳಿ ಬಂದಿತ್ತು. ಇದೀಗ ಬಿಜೆಪಿಗೆ ಮತದಾರ ಚುನಾವಣೆಯಲ್ಲಿ ಉತ್ತರಿಸಿದ್ದಾನೆ.
ಕೊಲ್ಹಾಪುರ ಜಿಲ್ಲಾ ವ್ಯಾಪ್ತಿಯ ಹತ್ತು ಕ್ಷೇತ್ರಗಳಲ್ಲಿ ಕೇವಲ ಒಂದೇ ಒಂದು ಕ್ಷೇತ್ರದ ಮತದಾರರು ಮಾತ್ರವೇ ಬಿಜೆಪಿ-ಶಿವಸೇನೆಯನ್ನು ಬೆಂಬಲಿಸಿದ್ದಾರೆ. ಉಳಿದಂತೆ ಕಾಂಗ್ರೆಸ್ ನಾಲ್ಕು ಕ್ಷೇತ್ರಗಳಲ್ಲಿ, ಎನ್ಸಿಪಿ ಮತ್ತು ಪಕ್ಷೇತರರು ಎರಡು ಕ್ಷೇತ್ರಗಳಲ್ಲಿ ಮತ್ತು ಒಂದು ಕ್ಷೇತ್ರದಲ್ಲಿ ಜೆಎಸ್ಎಸ್ ಪಕ್ಷದ ಅಭ್ಯರ್ಥಿ ಜಯ ಸಾಧಿಸಿದರು.
ಇನ್ನು ಸಾಂಗ್ಲಿ ಜಿಲ್ಲೆಯಲ್ಲಿ ಎಂಟು ಅಸೆಂಬ್ಲಿ ಕ್ಷೇತ್ರಗಳಿದ್ದು, ಬಿಜೆಪಿ-ಶಿವಸೇನೆ ಮೈತ್ರಿಕೂಟವನ್ನು ಮೂರು ಕ್ಷೇತ್ರದ ಮತದಾರರು ಬೆಂಬಲಿಸಿದ್ದಾರೆ. ಉಳಿದ ಐದು ಕ್ಷೇತ್ರಗಳ ಪೈಕಿ ಎನ್ಸಿಪಿ ಮೂರು ಮತ್ತು ಕಾಂಗ್ರೆಸ್ ಅಭ್ಯರ್ಥಿಗಳು ಎರಡು ಕ್ಷೇತ್ರಗಳಲ್ಲಿ ಜಯ ಸಾಧಿಸಿದ್ದಾರೆ.
ತೀವ್ರ ಪ್ರವಾಹದಿಂದ ಸಂಕಷ್ಟ ಅನುಭವಿಸಿದ್ದ ಎರಡು ಜಿಲ್ಲೆಗಳ ಒಟ್ಟು ಹದಿನೆಟ್ಟು ಕ್ಷೇತ್ರಗಳ ಪೈಕಿ ಬಿಜೆಪಿ-ಶಿವಸೇನೆ ಮೈತ್ರಿಕೂಟ ಕೇವಲ ನಾಲ್ಕೇ ನಾಲ್ಕು ಕ್ಷೇತ್ರಗಳಲ್ಲಿ ಗೆಲುವು ದಾಖಲಿಸುವ ಮೂಲಕ ತೀವ್ರ ಮುಖಭಂಗ ಅನುಭವಿಸಿದೆ. ಆ ಮೂಲಕ ಮತದಾರರು ತಮ್ಮ ಆಕ್ರೋಶವನ್ನು ಬಿಜೆಪಿ ಪಕ್ಷದ ವಿರುದ್ಧ ವ್ಯಕ್ತಪಡಿಸಿದ್ದಾರೆ.