ಬೆಂಗಳೂರು, ಅ.25(Daijiworld News/SS): ಭಾರತ ಮತ್ತು ಪಾಕಿಸ್ತಾನ ಮಧ್ಯೆ ಗಡಿನಿಯಂತ್ರಣ ರೇಖೆಯುದ್ದಕ್ಕೂ ಇರುವ ಭಯೋತ್ಪಾದಕ ಶಿಬಿರ ತಾಣಗಳನ್ನು ಭಯೋತ್ಪಾದಕರನ್ನು ಭಾರತಕ್ಕೆ ಕಳುಹಿಸಲು ಬಳಸಲಾಗುತ್ತಿದೆ ಎಂಬುದು ಎಲ್ಲರಿಗೂ ಗೊತ್ತಿರುವ ವಿಚಾರ ಎಂದು ವಿದೇಶಾಂಗ ವ್ಯವಹಾರಗಳ ಇಲಾಖೆ ವಕ್ತಾರ ರವೀಶ್ ಕುಮಾರ್ ಹೇಳಿದ್ದಾರೆ.
ಭಾರತದ ವಿರೋಧವಿದ್ದರೂ ಪಾಕ್ ಆಕ್ರಮಿತ ಕಾಶ್ಮೀರ ಪ್ರದೇಶಕ್ಕೆ ವಿದೇಶಿ ನಿಯೋಗಗಳನ್ನು ಕರೆದೊಯ್ದಿರುವುದು ಪಾಕಿಸ್ತಾನ ಆಡುತ್ತಿರುವ ನಾಟಕವಾಗಿದೆ. ಇಂತಹ ಸುಳ್ಳು, ಬೆತ್ತಲೆ ಪ್ರಚಾರವನ್ನು ಪಾಕಿಸ್ತಾನ ಮಾಡುತ್ತಾ ಬಂದಿದೆ. ಪಾಕಿಸ್ತಾನ ಅಲ್ಲಿಗೆ ಕರೆದುಕೊಂಡು ಹೋಗಿ ಅಲ್ಲಿನ ವಾಸ್ತವ ಸಂಗತಿಯನ್ನು ಮರೆಮಾಚಿ ಸಂಪೂರ್ಣ ಭಿನ್ನ ಚಿತ್ರಣವನ್ನು ತೋರಿಸಲು ಪ್ರಯತ್ನಿಸುತ್ತಿದೆ ಎಂದು ಅವರು ದೂರಿದರು.
ಕಾಶ್ಮೀರದ ನಿಯಂತ್ರಣ ರೇಖೆಯ ಉದ್ದಕ್ಕೂ ಹಲವಾರು ಭಯೋತ್ಪಾದಕ ಶಿಬಿರ ತಾಣಗಳನ್ನು ಗುರಿಯಾಗಿಸಿಕೊಂಡು ಭಾರತ ಫಿರಂಗಿ ಗುಂಡಿನ ದಾಳಿ ನಡೆಸಿದ ನಂತರ ಪಾಕಿಸ್ತಾನ ವಿದೇಶಿ ರಾಯಭಾರಿಗಳನ್ನು ಕರೆದೊಯ್ದಿದೆ. ಮಾತ್ರವಲ್ಲ, ವಿದೇಶಿ ರಾಯಭಾರಿಗಳ ನಿಯೋಗವನ್ನು ಪಾಕ್ ಆಕ್ರಮಿತ ಕಾಶ್ಮೀರ ಭಾಗಕ್ಕೆ ಪಾಕಿಸ್ತಾನ ಕರೆದುಕೊಂಡು ಹೋಗಿ ನಾಗರಿಕರು ನೆಲೆಸಿರುವ ಪ್ರದೇಶಗಳಲ್ಲಿ ಭಾರತೀಯ ಸೇನೆ ಅಪ್ರಚೋದಿತ ಗುಂಡಿನ ದಾಳಿ ನಡೆಸಿ ತೊಂದರೆ ಕೊಡುತ್ತಿದೆ ಎಂದು ಆರೋಪ ಮಾಡಿತ್ತು.