ಚಿಕ್ಕಮಗಳೂರು, ಅ.25(Daijiworld News/SS): ಕ್ಯಾರ್ ಚಂಡಮಾರುತ ಗಾಳಿ ಮಳೆ ಹೊತ್ತು ತರುತ್ತಿದೆ. ಈ ಮುನ್ಸೂಚನೆ ನೀಡಿರುವ ಹವಾಮಾನ ಇಲಾಖೆ ಎಚ್ಚರಿಕೆ ವಹಿಸುವಂತೆ ಸೂಚನೆ ನೀಡಿದೆ. ಕ್ಯಾರ್ ಚಂಡಮಾರುತದ ಪರಿಣಾಮ ಕರ್ನಾಟಕದ ಕರಾವಳಿ, ಮಲೆನಾಡು ಭಾಗದಲ್ಲಿ ಭಾರಿ ಬಿರುಗಾಳಿ ಸಹಿತ ಮಳೆಯಾಗುತ್ತಿದೆ.
ಜಿಲ್ಲೆಯ ಮೂಡಿಗೆರೆ ತಾಲೂಕಿನಲ್ಲಿ ಗಾಳಿ ಮಳೆಯಾಗುತ್ತಿದೆ. ಮಳೆಯ ಅಬ್ಬರಕ್ಕೆ ಹೇಮಾವತಿ ನದಿಯು ತುಂಬಿ ಹರಿಯುತ್ತಿದ್ದು, ಬಂಕೇನಹಳ್ಳಿ ಕಾಲುಸಂಕ ಕೊಚ್ಚಿ ಹೋಗಿದೆ. ಎರಡು ತಿಂಗಳ ಹಿಂದಿನ ಮಳೆಗೆ ಇಲ್ಲಿನ ಸೇತುವೆ ನೀರು ಪಾಲಾಗಿತ್ತು. ನಂತರದಲ್ಲಿ ಸ್ಥಳಿಯರೇ ಸೇರಿ ಕಾಲುಸಂಕ ನಿರ್ಮಿಸಿದ್ದರು. ಈಗ ಆ ಕಾಲುಸಂಕವೂ ಕೊಚ್ಚಿ ಹೊಗಿದೆ. ಇದರಿಂದಾಗಿ ಬಂಕೇನಹಳ್ಳಿ, ಕೂಡಳ್ಳಿ, ಚೇಗು ಸಂಪರ್ಕ ಕಡಿತವಾಗಿದೆ.
ಭಾರಿ ಬಿರುಗಾಳಿಗೆ ಕೊಟ್ಟಿಗೆ ಹಾರದಲ್ಲಿರುವ ಮನೆಯ ಹಂಚುಗಳು ಹಾರಿ ಹೋಗಿವೆ. ಮಳೆ, ಗಾಳಿಯಿಂದಾಗಿ ಈ ಭಾಗದ ಜನರು ಭಾರಿ ನಷ್ಟ ಅನುಭವಿಸಿದ್ಧಾರೆ. ಭಾರಿ ಗಾಳಿಗೆ ಕೊಪ್ಪ ತಾಲೂಕಿನ ಬಾಳೆ ಖಾನ್ ಎಸ್ಟೆಟ್ ಬಳಿ ಮರಬಿದ್ದು ಹಸುವೊಂದು ಮೃತಪಟ್ಟ ಘಟನೆ ಶುಕ್ರವಾರ ನಡೆದಿದೆ. ಬಿರುಗಾಳಿ ಪರಿಣಾಮವಾಗಿ ಬೃಹತ್ ಗಾತ್ರದ ಮರ ಧರೆಗುರುಳಿ ಬಿದ್ದು ಹಸು ಸಾವನ್ನಪ್ಪಿದೆ.
ಕರಾವಳಿ ಜಿಲ್ಲೆಗಳಲ್ಲಿ ಭಾರೀ ಮಳೆಯಾಗುವ ಮುನ್ಸೂಚನೆ ನೀಡಿದ ಹವಾಮಾನ ಇಲಾಖೆ, ಮೀನುಗಾರರಿಗೆ, ನದಿ ಬದಿಯ ಜನ ನೀರಿಗಿಳಿಯದಂತೆ ಸೂಚಿಸಿದೆ. ದಕ್ಷಿಣ ಕನ್ನಡ, ಉತ್ತರ ಕನ್ನಡದಲ್ಲಿ ಬಿರುಗಾಳಿ ಸಹಿತ ಧಾರಾಕಾರ ಮಳೆ ಆಗುತ್ತಿದ್ದು, ಸಮುದ್ರದಲ್ಲಿ ಅಲೆಗಳು ಅಬ್ಬರಿಸುತ್ತಿವೆ. ಸಮುದ್ರ ಕೊರೆತ ಉಂಟಾಗಿದೆ. ಮೀನುಗಾರರು ಸಮುದ್ರಕ್ಕೆ ಇಳಿಯದಂತೆ ಎಚ್ಚರಿಸಲಾಗಿದೆ.