ನವದೆಹಲಿ, ಅ 25 (Daijiworld News/MSP): ಮಸೀದಿಗಳಲ್ಲಿ ಲಿಂಗ ತಾರತಮ್ಯ ಮಾಡದೆ ಮಹಿಳೆಯರಿಗೂ ಪ್ರವೇಶ ಕೋರಿ ಸುಪ್ರೀಂಕೋರ್ಟ್ನಲ್ಲಿ ಸಲ್ಲಿಸಲಾಗಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯ ವಿಚಾರಣೆ ನಡೆದಿದ್ದು, ಈ ವಿಷಯದ ಬಗ್ಗೆ ಸುಪ್ರೀಂಕೋರ್ಟ್ ಕೇಂದ್ರ ಸರ್ಕಾರದ ಅಭಿಪ್ರಾಯ ಕೇಳಿದೆ.
ಯಾಸ್ಲಿನ್ ಜುಬೀರ್ ಅಹ್ಮದ್ ಪರೀಜಾದ್ ಎಂಬುವರು ಮುಸ್ಲಿಂ ಮಹಿಳೆಯರಿಗೂ ಮಸೀದಿ ಒಳಗೆ ಪ್ರವೇಶ ನೀಡಬೇಕು ಎಂದು ಕೋರಿ ಪಿಐಎಲ್ ಸಲ್ಲಿಸಿದ್ದರು. ಮಸೀದಿಗೆ ಮಹಿಳೆಯರಿಗೆ ಪ್ರವೇಶ ನಿರಾಕರಿಸುವುದರಿಂದ ಮೂಲಭೂತ ಹಕ್ಕು ಉಲ್ಲಂಘಿಸಿದಂತೆ ಆಗುತ್ತದೆ ಎನ್ನುವುದು ಸುಪ್ರೀಂ ಗೆ ಸಲ್ಲಿಸಿದ ಮನವಿಯಲ್ಲಿ ತಿಳಿಸಿದ್ದರು.
ಈ ಕುರಿತಾಗಿ ವಿಚಾರಣೆ ನಡೆಸಿದ ಸುಪ್ರೀಂ ಕೋರ್ಟ್ ನ ಮುಖ್ಯನ್ಯಾಯಮೂರ್ತಿ ರಂಜನ್ ಗೊಗೊಯ್ ನೇತೃತ್ವದ ಅವರ ನ್ಯಾಯಪೀಠ ಕೇಂದ್ರ ಕಾನೂನು ಹಾಗೂ ಅಲ್ಪಸಂಖ್ಯಾತ ಸಚಿವಾಲಯಕ್ಕೆ ನೊಟೀಸ್ ನೀಡಿ ಪತ್ರಿಕ್ರಿಯೆ ನೀಡುವಂತೆ ತಿಳಿಸಿದೆ.
ಶಬರಿಮಲೆಗೆ ಮಹಿಳೆಯರಿಗೆ ಪ್ರವೇಶ ನೀಡಿ ಸುಪ್ರೀಂಕೋರ್ಟ್ ತೀರ್ಪು ನೀಡಿತ್ತು. ಅಂದಿನಿಂದ ಮುಸ್ಲಿಂ ಮಹಿಳೆಯರಿಗೂ ಮಸೀದಿ ಒಳಕ್ಕೆ ಹೋಗಲು ಅವಕಾಶ ನೀಡುವ ಕುರಿತು ಚರ್ಚೆಗಳು ನಡೆದಿತ್ತು.