ನವದೆಹಲಿ, ಅ 26 (Daijiworld News/MSP):ಪ್ರಧಾನಿ ನರೇಂದ್ರ ಮೋದಿಯವರ "ಮನ್ ಕಿ ಬಾತ್" ಮಾಸಿಕ ರೇಡಿಯೋ ಕಾರ್ಯಕ್ರಮ ದೇಶದೆಲ್ಲೆಡೆ ಜನಪ್ರೀಯವಾಗಿದ್ದು, ಇದೀಗ ಅದಕ್ಕೆ ಸೆಡ್ಡು ಹೊಡೆಯಲು ಕಾಂಗ್ರೆಸ್ ತನ್ನ "ದೇಶ್ ಕಿ ಬಾತ್" ಕಾರ್ಯಕ್ರಮವನ್ನು ಶನಿವಾರದಿಂದ ಪ್ರಾರಂಭಿಸುತ್ತಿದ್ದು, ಅದನ್ನು ಸಾಮಾಜಿಕ ಮಾಧ್ಯಮ ವೇದಿಕೆಗಳಲ್ಲಿ ನೇರ ಪ್ರಸಾರ ಮಾಡಲಿದೆ.
"ದೇಶ್ ಕಿ ಬಾತ್" ಮೊದಲ ಎಪಿಸೋಡ್ ಅನ್ನು ಶನಿವಾರ ಬೆಳಿಗ್ಗೆ 11 ಗಂಟೆಗೆ ಆರಂಭವಾಗಲಿದ್ದು ಇದನ್ನು ಪಕ್ಷದ ವಕ್ತಾರ ಪವನ್ ಖೆರಾ ನಡೆಸಿಕೊಡಲಿದ್ದಾರೆ.
ಈ ಬಗ್ಗೆ ಮಾಹಿತಿ ನೀಡಿದ ಕಾಂಗ್ರೆಸ್ ನ ಸೋಷಿಯಲ್ ಮೀಡಿಯಾ ಮುಖ್ಯಸ್ಥ ರೋಹನ್ ಗುಪ್ತಾ, "ದೇಶ್ ಕಿ ಬಾತ್" ದೇಶದ ಜನಸಾಮಾನ್ಯರ ಸಮಸ್ಯೆಗಳನ್ನು, ಸರ್ಕಾರದ ವೈಫಲ್ಯ, ಈಡೇರಿಸದ ಭರವಸೆ, ಆರ್ಥಿಕತೆ, ಕೃಷಿ ಬಿಕ್ಕಟ್ಟು, ನಿರುದ್ಯೋಗ, ಬೆಲೆ ಏರಿಕೆ ಮುಂತಾದ ಪ್ರಮುಖ ಸಾರ್ವಜನಿಕ ಸಮಸ್ಯೆಗಳ ಬಗ್ಗೆ ಚರ್ಚಿಸಿ ಸರ್ಕಾರವನ್ನು ಈ ಬಗ್ಗೆ ಪ್ರಶ್ನಿಸುತ್ತದೆ ಎಂದು ಹೇಳಿದ್ದಾರೆ.
ಪಕ್ಷದ ಹಿರಿಯ ಮುಖಂಡರೊಬ್ಬರು ಮಾತನಾಡಿ "ಕಾಂಗ್ರೆಸ್ ನ ಸೋಷಿಯಲ್ ಮೀಡಿಯಾ ತಂಡವು ದೇಶದ ನೈಜ ಸಮಸ್ಯೆಗಳ ಬಗ್ಗೆ ಚರ್ಚಿಸಲು 'ದೇಶ್ ಕಿ ಬಾತ್' ಎಂಬ ಹೊಸ ಸರಣಿಯನ್ನು ಆರಂಭಿಸುತ್ತಿದೆ. ಇತ್ತೀಚೆಗೆ ನಡೆದ ವಿಧಾನಸಭಾ ಚುನಾವಣಾ ಫಲಿತಾಂಶಗಳು ಗಮನಿಸಿದಾಗ ಜನರ ಆದೇಶ ಸ್ಪಷ್ಟವಾಗಿದೆ. ಜನರ ಸಮಸ್ಯೆಗಳನ್ನು ಬಗೆಹರಿಸಬೇಕಾಗಿದೆ. ದೇಶದಲ್ಲಿ ಜವಾಬ್ದಾರಿಯುತ ಪ್ರತಿಪಕ್ಷವಾಗಿ, ಕಾಂಗ್ರೆಸ್ ಸಾರ್ವಜನಿಕರಿಗೆ ಸಂಬಂಧಿಸಿದ ಸಮಸ್ಯೆಗಳನ್ನು ಸರ್ಕಾರದ ಮುಂದಿಡುತ್ತದೆ. 'ದೇಶ್ ಕಿ ಬಾತ್’ ನ ಪ್ರತಿಯೊಂದು ಸಂಚಿಕೆಯಲ್ಲಿ ಪ್ರಮುಖ ಸಮಸ್ಯೆಗಳ ಬಗ್ಗೆ ಚರ್ಚಿಸಲಾಗುತ್ತದೆ. ಹಾಗೂ ಈ ಕಾರ್ಯಕ್ರಮ ಪಕ್ಷದ ಮುಖಂಡರು ಮತ್ತು ವಕ್ತಾರರು ನಡೆಸಿಕೊಡಲಿದ್ದಾರೆ ಎಂದರು.