ಕಾನ್ಪುರ, ಅ 26 (Daijiworld News/MSP): ಶಿಕ್ಷಕನೊಬ್ಬ 8 ನೇ ತರಗತಿ ವಿದ್ಯಾರ್ಥಿನಿಯನ್ನು ಗುಂಡಿಕ್ಕಿ ಕೊಂದ ಭಯಾನಕ ಘಟನೆ ಉತ್ತರ ಪ್ರದೇಶದ ಕಾನ್ಪುರ್ ದೇಹತ್ ಜಿಲ್ಲೆಯಲ್ಲಿ ನಡೆದಿದೆ.
ವಿದ್ಯಾರ್ಥಿನಿ ಶಾಲೆ ಮುಗಿಸಿ ಮನೆಗೆ ಹಿಂತಿರುಗುತ್ತಿದ್ದಾಗ, ಆಕೆಗಾಗಿ ಕಾದು ಕುಳಿತಿದ್ದ ಶಿಕ್ಷಕ ನೇರವಾಗಿ ಗುಂಡಿಕ್ಕಿದ್ದಾನೆ. ಆತ ಮೂರು ಗಂಡು ಹಾರಿಸಿದ್ದು, ಈ ಪೈಕಿ ಒಂದು ಗುಂಡು ನೇರವಾಗಿ ಬಾಲಕಿಯ ಕುತ್ತಿಗೆಗೆ ಹೊಕ್ಕಿ ಆಕೆ ನೆಲದ ಮೇಲೆ ಕುಸಿದು ಬಿದ್ದಿದ್ದಾಳೆ. ತಕ್ಷಣ ಆಕೆಯನ್ನು ಆಸ್ಪತ್ರೆಗೆ ರವಾನಿಸಲಾಯಿತಾದರೂ, ಆಪ್ಸತ್ರೆಯಲ್ಲಿ ಚಿಕಿತ್ಸೆ ಫಲಿಸದೆ ಗುರುವಾರ ರಾತ್ರಿ ಆಕೆ ಮೃತಪಟ್ಟಿದ್ದಾಳೆ.
ಆರೋಪಿ ಶಿಕ್ಷಕನನ್ನು ಶೈಲೇಂದ್ರ ರಜಪೂತ್ ಎಂದು ಗುರುತಿಸಲಾಗಿದೆ. ಈತ ವಿದ್ಯಾರ್ಥಿನಿಗೆ ಹಲವು ದಿನಗಳಿಂದ ಕಿರುಕುಳ ನೀಡುತ್ತಿದ್ದು, ಈ ಕಾರಣದಿಂದಾಗಿ ಶಾಲೆಯ ಆಡಳಿತ ಮಂಡಳಿ ಆತನನ್ನು ಮೂರು ತಿಂಗಳುಗಳ ಕಾಲ ಅಮಾನತುಗೊಳಿಸಿತ್ತು. ಇದರಿಂದ ಆಕ್ರೋಶಗೊಂಡಿದ್ದ ಶಿಕ್ಷಕ ವಿದ್ಯಾರ್ಥಿನಿಯ ಕೊಲೆ ಮಾಡಿದ್ದಾನೆ ಎಂದು ವರದಿಯಾಗಿದೆ.
ಘಟನೆಯ ನಂತರ, ಗ್ರಾಮಸ್ಥರೆಲ್ಲರೂ ರೊಚ್ಚಿಗೆದ್ದಿದ್ದು ಪ್ರತಿಭಟನೆ ನಡೆಸಿ, ರಸ್ತೆ ತಡೆ ನಡೆಸಿದ್ದಾರೆ. ಬಾಲಕಿಯ ಕುಟುಂಬ ಸದಸ್ಯರು ಆರೋಪಿಗಳಿಗೆ ಮರಣದಂಡನೆ ವಿಧಿಸುವಂತೆ ಒತ್ತಾಯಿಸಿದ್ದಾರೆ. ಆರೋಪಿಯ ವಿರುದ್ಧ ಎಫ್ಐಆರ್ ದಾಖಲಿಸಲಾಗಿದ್ದು, ತನಿಖೆ ಮುಂದುವರಿದಿದೆ.