ಬೆಂಗಳೂರು, ಅ.26(Daijiworld News/SS): ತರಬೇತಿ ಜೊತೆಗೆ ಉದ್ಯೋಗದಲ್ಲಿ ಖಾತ್ರಿ ಸಹ ನೀಡಿದರೆ ನಿರುದ್ಯೋಗ ಸಮಸ್ಯೆ ನಿವಾರಣೆಯಾಗಲಿದೆ ಎಂದು ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಜಗದೀಶ್ ಶೆಟ್ಟರ್ ಹೇಳಿದರು.
"ಇನ್ವೆಸ್ಟ್ ಕರ್ನಾಟಕ ಹುಬ್ಬಳ್ಳಿ ಸಮ್ಮೇಳನ" ಜನವರಿ 17ರಂದು ಹುಬ್ಬಳ್ಳಿಯಲ್ಲಿ ನಡೆಯಲಿದ್ದು, ಈ ಸಂಬಂಧ ಪೂರ್ವಭಾವಿ ಸಭೆ ನಡೆಸಲಾಯಿತು. ಈ ವೇಳೆ ಮಾತನಾಡಿದ ಅವರು, ಹುಬ್ಬಳ್ಳಿ, ಬೆಳಗಾವಿ, ರಾಯಚೂರು ಈ ಭಾಗದಲ್ಲಿ ಕೌಶಲ್ಯ ತರಬೇತಿ ಕೇಂದ್ರ ತೆರೆಯುವುದರಿಂದ ಈ ಭಾಗದ ಯುವಕರಿಗೆ ವೃತ್ತಿಪರ ತರಬೇತಿ ನೀಡಿ ಉದ್ಯೋಗ ಪಡೆದುಕೊಳ್ಳಲು ಸಹಕಾರಿಯಾಗಲಿದೆ. ತರಬೇತಿ ಜೊತೆಗೆ ಉದ್ಯೋಗದಲ್ಲಿ ಖಾತ್ರಿ ಸಹ ನೀಡಿದರೆ ನಿರುದ್ಯೋಗ ಸಮಸ್ಯೆ ನಿವಾರಣೆಯಾಗಲಿದೆ. ಈ ನಿಟ್ಟಿನಲ್ಲಿ ಗಮನಹರಿಸುವಂತೆ ಅಧಿಕಾರಿಗಳಿಗೆ ಸಲಹೆ ನೀಡಿದರು.
ಹುಬ್ಬಳ್ಳಿ ಭಾಗದಲ್ಲಿ ಯಾವ ವಲಯಗಳಲ್ಲಿ ಕೈಗಾರಿಕೆಗೆ ಪೂರಕ ವಾತಾವರಣವಿದೆ ಎಂಬ ಬಗ್ಗೆ ಅಧ್ಯಯನ ನಡೆಸಿ. ಡಿಫೆನ್ಸ್ ಅಥವಾ ಇತರೆ ಕೈಗಾರಿಕಾ ತಯಾರಿಕಾ ಘಟಕ ಸ್ಥಾಪನೆಗೆ ಈ ಪ್ರದೇಶ ಪ್ರಸ್ತುತ ಎಂಬುದನ್ನು ತಿಳಿದುಕೊಳ್ಳಲು ಅಭಿಪ್ರಾಯ ಸಂಗ್ರಹದ ಅಗತ್ಯವಿದೆ. ಈ ನಿಟ್ಟಿನಲ್ಲಿ ಎಲ್ಲಾ ಕೈಗಾರಿಕಾ ಮುಖ್ಯಸ್ಥರು, ಕೈಗಾರಿಕಾ ಸಂಘಸಂಸ್ಥೆ ಸಂಬಂಧಪಟ್ಟವರೊಂದಿಗೆ ಪ್ರಾಥಮಿಕ ಸಭೆ ಆಯೋಜಿಸುವಂತೆಯೂ ಸೂಚಿಸಿದರು.
ಇದೇ ವೇಳೆ ಮಾತನಾಡಿದ ವಾಣಿಜ್ಯ ಮತ್ತು ಕೈಗಾರಿಕಾ ಇಲಾಖೆ ಆಯುಕ್ತ ಗೌರವ್ ಗುಪ್ತ, ಇನ್ವೆಸ್ಟ್ ಕರ್ನಾಟಕ ಹುಬ್ಬಳ್ಳಿ ಸಮ್ಮೇಳನದ ಭಾಗವಾಗಿ ನವೆಂಬರ್ ತಿಂಗಳಿಂದ ಜನವರಿ ವರೆಗೂ ಹೈದರಾಬಾದ್, ಮುಂಬೈ, ಕರ್ನಾಟಕದಲ್ಲಿ ರೋಡ್ ಶೋ ನಡೆಸಲು ಕಾರ್ಯಕ್ರಮ ರೂಪಿಸಲಾಗಿದೆ. ಜನವರಿ ತಿಂಗಳಲ್ಲಿ ನಡೆಯುವ ಸಮ್ಮೇಳನದಲ್ಲಿ 500ಕ್ಕೂ ಹೆಚ್ಚು ಉದ್ದಿಮೆದಾರರನ್ನು ಆಕರ್ಷಿಸುವ ಗುರಿ ಹೊಂದಲಾಗಿದೆ. ಜೊತೆಗೆ ವಿವಿದ ಸೆಕ್ಟರ್ಗಳ ಕುರಿತು ವಿಚಾರ ಸಂಕಿರಣ ಕೂಡ ನಡೆಯಲಿದೆ ಎಂದು ಮಾಹಿತಿ ನೀಡಿದರು.