ಮಡಿಕೇರಿ, ಅ.26(Daijiworld News/SS): ಮಲೆನಾಡು. ಕರಾವಳಿ ಮತ್ತು ಉತ್ತರ ಕರ್ನಾಟಕದಲ್ಲಿ ವರುಣ ಅಬ್ಬರಿಸುತ್ತಿದ್ದಾನೆ. ಉತ್ತರ ಕರ್ನಾಟಕ ಭಾಗಕ್ಕೆ ಮಾತ್ರ ಸೀಮಿತವಾಗಿದ್ದ ವರುಣನ ಆರ್ಭಟ ಇದೀಗ ಕೊಡಗು ಜಿಲ್ಲೆಯಲ್ಲಿಯೂ ಶುರುವಾಗಿದ್ದು, ಕ್ಯಾರ್ ಚಂಡಮಾರುತದ ಪರಿಣಾಮ ಜಿಲ್ಲೆಗೂ ತಟ್ಟಿದೆ.
ಮಳೆಯ ಆರ್ಭಟಕ್ಕೆ ಕೊಡಗು ಜಿಲ್ಲೆಯಾದ್ಯಂತ ಪ್ರವಾಸೋದ್ಯಮ ತತ್ತರಿಸಿ ಹೋಗಿದೆ. ಇತ್ತೀಚೆಗೆ ಉತ್ತರ ಕರ್ನಾಟಕದಾದ್ಯಂತ ಹಲವು ಜಿಲ್ಲೆಗಳಲ್ಲಿ ವರುಣನ ಆರ್ಭಟದಿಂದ ತತ್ತರಿಸಿ ಹೋಗಿದ್ದವು. ಈಗ ಮತ್ತೊಮ್ಮೆ ರಾಜ್ಯದ ಕೆಲವು ಜಿಲ್ಲೆಗಳಲ್ಲಿ ನೆರೆಯಾಗಿದ್ದು, ಅಲ್ಲಿನ ಜನಜೀವನ ಅಸ್ತವ್ಯಸ್ತಗೊಂಡಿದೆ.
ಕಾವೇರಿ ನಿಸರ್ಗಧಾಮ, ದುಬಾರೆ ಆನೆ ಕ್ಯಾಂಪ್ ಶಿಬಿರ, ದುಬಾರೆಯ ರಿವರ್ ರಾಫ್ಟಿಂಗ್, ಹಾರಂಗಿ ಅಣೆಕಟ್ಟು, ಅಬ್ಬಿ ಜಲಪಾತ, ಗೋಲ್ಡನ್ ಟೆಂಪಲ್, ಚಿಕ್ಲಿಹೊಳೆ ಜಲಾಶಯ ಮುಂತಾದ ಪ್ರೇಕ್ಷಣೀಯ ಸ್ಥಳಗಳಲ್ಲಿ ದಿನದೂಡುತ್ತಿದ್ದ ಪ್ರವಾಸಿಗರ ಸಂಖ್ಯೆ ಇಳಿಮುಖವಾಗಿದೆ. ಪ್ರವಾಸಿಗರ ಆಗಮನವಿಲ್ಲದೆ ವ್ಯಾಪಾರ ವಹಿವಾಟುಗಳು ಕಡಿಮೆಯಾಗಿದೆ.
ಅರಬ್ಬೀ ಸಮುದ್ರ ಹಾಗೂ ಲಕ್ಷ ದ್ವೀಪದಲ್ಲಿ ವಾಯುಭಾರ ಕುಸಿತದ ಹಿನ್ನೆಲೆಯಲ್ಲಿ ಕೊಡಗು ಜಿಲ್ಲೆಯಲ್ಲಿ ಭಾರೀ ಮಳೆಯಾಗಲಿದೆ ಎಂದು ಭಾರತೀಯ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.