ಬೆಂಗಳೂರು, ಅ.26(Daijiworld News/SS): ಕಾಂಗ್ರೆಸ್ ಪ್ರಾಮಾಣಿಕ ಕಾರ್ಯಕರ್ತನಾದ ನನ್ನ ಮೇಲೆ ಆದ ಅನ್ಯಾಯವನ್ನು ಖಂಡಿಸಿ ಪ್ರತಿಭಟನೆ ನಡೆಸಿದ್ರಿ. ನಿಮಗೆ ನನಗೆ ಧನ್ಯವಾದ ಎಂದು ಅಭಿಮಾನಿಗಳು ಹಾಗೂ ಕಾಂಗ್ರೆಸ್ ಕಾರ್ಯಕರ್ತರಿಗೆ ಮಾಜಿ ಸಚಿವ ಡಿ.ಕೆ.ಶಿವಕುಮಾರ್ ಕೈ ಮುಗಿದರು.
ಸಂಕಷ್ಟದ ವೇಳೆ ನನ್ನ ಬೆಂಬಲಕ್ಕೆ ನಿಂತ ಎಲ್ಲರಿಗೂ ಅಭಿನಂದನೆ ಸಲ್ಲಿಸುತ್ತೇನೆ. ಹಗಲು-ರಾತ್ರಿ ನನಗೋಸ್ಕರ ಹೋರಾಟ ಮಾಡಿ, ಪೂಜೆ ಸಲ್ಲಿಸಿದ ನಿಮಗೆ ಅಭಿನಂದನೆಗಳು. ಇದು ಒಂದು ದಿನಕ್ಕೆ ಮುಗಿಯುವ ಅಧ್ಯಾಯವಲ್ಲ. ಇದು ಆರಂಭ ಅಷ್ಟೇ, ಅಂತ್ಯ ಅಲ್ಲ. ನಾನು ಯಾರಿಂದಲೂ ಲಂಚ ಪಡೆದಿಲ್ಲ. ಯಾರಿಗೂ ಹೆದರುವ ಅಗತ್ಯವಿಲ್ಲ. ಜೈಲಿನಲ್ಲಿ ಇರಿಸಿದ್ದಕ್ಕೆ ನಾನು ಎದೆಗುಂದಿಲ್ಲ ಎಂದು ಹೇಳಿದರು.
ಕನ್ನಡಪರ ಸಂಘಟನೆಗಳು, ನನ್ನ ಅಭಿಮಾನಿಗಳು ಪ್ರತಿಭಟನೆ ನಡೆಸಿ ಬಿಡುಗಡೆಗೆ ಒತ್ತಾಯಿಸಿದರು. ಇದನ್ನು ನಾನು ಯಾವತ್ತೂ ಮರೆಯುವುದಿಲ್ಲ. ನಾನು ಒಂದು ಕುಟುಂಬದ ಆಸ್ತಿಯಲ್ಲ. ನಿಮ್ಮೆಲ್ಲರ ಕುಟುಂಬದ ಆಸ್ತಿ. ನಿಮ್ಮ ಹೆಸರಿಗೆ ಧಕ್ಕೆ ಬರದಂತೆ ಜೀವನ ನಡೆಸುತ್ತೇನೆ ಎಂದು ಹೇಳಿದರು.