ಕಲಬುರಗಿ, ಅ.26(Daijiworld News/SS): ಕಲಬುರಗಿ ಹೈಕೋರ್ಟ್ ಪೀಠದಲ್ಲಿ ಆಪರೇಷನ್ ಕಮಲ ಆಡಿಯೋ ಕ್ಲಿಪ್ ಪ್ರಕರಣದ ವಿಚಾರಣೆ ಮೇಲಿದ್ದ ತಡೆ ತೆರವುಗೊಳಿಸುವಂತೆ ಕೋರಿ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆದಿದ್ದು, ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರಿಗೆ ಮತ್ತೆ ರಿಲೀಫ್ ಸಿಕ್ಕಿದೆ.
ರಾಯಚೂರು ಜಿಲ್ಲೆಯ ದೇವದುರ್ಗ ಪೊಲೀಸ್ ಠಾಣೆಯಲ್ಲಿ ದಾಖಲಾಗಿದ್ದ ಈ ದೂರಿನ ವಿರುದ್ಧ ಆರೋಪಿಗಳು ಸಲ್ಲಿಸಿದ್ದ ಮನವಿಯನ್ನು ಪರಿಗಣಿಸಿಯೇ ಕಲಬುರಗಿ ಹೈಕೋರ್ಟ್ ಪೀಠ ತಡೆ ನೀಡಿತ್ತು. ಆಪರೇಷನ್ ಕಮಲಕ್ಕೆ ಸಂಬಂಧಿಸಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ, ದೇವದುರ್ಗ ಶಾಸಕ ಶಿವನಗೌಡ ನಾಯಕ್, ಪೀತ್ರಂ ಗೌಡ ಮತ್ತು ಪತ್ರಕರ್ತ ಮರಮಕಲ್ ವಿರುದ್ಧ ದೂರು ದಾಖಲಾಗಿತ್ತು. ಇದೀಗ ಈ ಕುರಿತ ವಿಚಾರಣೆ ಹೈಕೋರ್ಟ್ ಗುಲಬರ್ಗಾ ಪೀಠದಲ್ಲಿ ನಡೆದಿದೆ.
ಗುರುಮಿಠಕಲ್ ಶಾಸಕ ನಾಗನಗೌಡ ಕಂದಕೂರ ಪುತ್ರ ಶರಣಗೌಡ ಪಾಟೀಲರ ಅರ್ಜಿ ವಿಚಾರಣೆಯನ್ನು ಹೈಕೋರ್ಟ್ ಗುಲಬರ್ಗಾ ಪೀಠವು ವಿಚಾರಣೆ ನಡೆಸಿ, ನ.7ಕ್ಕೆ ಮುಂದೂಡಿದೆ.
ಶಾಸಕ ಕಂದಕೂರ ಅವರನ್ನು ಬಿಜೆಪಿಗೆ ಸೆಳೆಯಲು ಯಡಿಯೂರಪ್ಪ ಅವರು ಶರಣಗೌಡ ಅವರಿಗೆ 10 ಕೋ. ರೂ. ಆಮಿಷವೊಡ್ಡಿದ್ದಾರೆ ಎನ್ನಲಾದ ಆಡಿಯೋ ಸಿಡಿಯನ್ನು ಆಗಿನ ಸಿಎಂ ಎಚ್.ಡಿ. ಕುಮಾರಸ್ವಾಮಿ ಬಿಡುಗಡೆ ಮಾಡಿದ್ದರು. ಈ ಕುರಿತು ಪ್ರಕರಣ ದಾಖಲಾಗಿ, ತನಿಖೆ ಶುರುವಾಗಿತ್ತು. ಆಗ ಯಡಿಯೂರಪ್ಪ ವಿಪಕ್ಷ ನಾಯಕರಾಗಿದ್ದರು. ಸದ್ಯ ಅರ್ಜಿದಾರರು ಮತ್ತು ಯಡಿಯೂರಪ್ಪ ಪರ ವಕೀಲರ ವಾದ-ಪ್ರತಿವಾದ ಆಲಿಸಿದ ನ್ಯಾಯಮೂರ್ತಿಗಳು ವಿಚಾರಣೆಯನ್ನು ನ.7ಕ್ಕೆ ಮುಂದೂಡಿದರು.