ಅಯೋಧ್ಯೆ,ಅ 27 (Daijiworld News/MSP): ಅಯೋಧ್ಯೆ ಗಿನ್ನಿಸ್ ದಾಖಲೆ ಬರೆದಿದೆ. ದೀಪಾವಳಿಯ ಹಿಂದಿನ ದಿನ ಪವಿತ್ರ ಕ್ಷೇತ್ರ ಅಯೋಧ್ಯೆ ನಗರ ದೀಪಗಳ ಮೂಲಕ ಗಿನ್ನಿಸ್ ಬುಕ್ ದಾಖಲೆಗೆ ಸೇರಿದೆ. ಒಂದೇ ದಿನ 5.5 ಲಕ್ಷ ದೀಪಗಳ ಹಚ್ಚುವ ಮೂಲಕ ಈ ದಾಖಲೆ ಬರೆದಿದೆ.
ಒಟ್ಟಾರೆ ಅಯೋಧ್ಯೆ ನಗರದಲ್ಲಿ 5.50 ಲಕ್ಷ ದೀಪಗಳಲ್ಲಿ, ಸುಮಾರು 4 ಲಕ್ಷ ದೀಪ ರಾಮ್ ಪೈಡಿಯಲ್ಲಿ ಬೆಳಗಿಸಲಾಗಿದ್ದರೆ ಉಳಿದವು ನಗರದ ಇತರೆ ದೇವತಾ ಮಂದಿರಗಳಲ್ಲಿ ಬೆಳಗಲ್ಪಟ್ಟವು.
ಅಯೋಧ್ಯೆಯ ದೀಪಗಳ ಉತ್ಸವದಲ್ಲಿ ಭಾಗವಹಿಸಲೆಂದು ಉತ್ತರ ಪ್ರದೇಶ ರಾಜ್ಯಪಾಲರಾದ ಆನಂದಿ ಬೆನ್ ಪಟೇಲ್, ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಮತ್ತು ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಆಗಮಿಸಿದ್ದರು. ಈ ಸಂದರ್ಭ ಶ್ರೀರಾಮನ ಆಳ್ವಿಕೆ ನಡೆಸಿದ ತ್ರೇತಾಯುಗದ ಮರುನಿರ್ಮಾಣ ಮಾಡಲಾಗಿತ್ತು. ಶ್ರೀರಾಮ ಹಾಗೂ ಸೀತಾದೇವಿ ಪುಷ್ಪಕ ವಿಮಾನದ ಮೂಲಕ ಸರಯೂ ನದಿಯ ದಂಡೆ ಮೇಲಿಳಿದ ದೃಶ್ಯಗಳನ್ನು ಪುನರ್ ಸೃಷ್ಟಿಸಲಾಗಿತ್ತು.