ನವದೆಹಲಿ, ಅ 28 (Daijiworld News/MSP): ಪ್ರಧಾನಿ ನರೇಂದ್ರ ಮೋದಿ ಅವರಿಗೆ ತನ್ನ ವಾಯುಪ್ರದೇಶವನ್ನು ಬಳಸುವುದನ್ನು ನಿರಾಕರಿಸಿದ ಪಾಕಿಸ್ತಾನದ ವರ್ತನೆಯ ವಿರುದ್ದ, ಭಾರತವು ಅಂತಾರಾಷ್ಟ್ರೀಯ ನಾಗರಿಕ ವಿಮಾನಯಾನ ಸಂಸ್ಥೆಯಲ್ಲಿ (ಐಸಿಎಒ) ಪ್ರಶ್ನಿಸಲು ಮುಂದಾಗಿದೆ ಎಂದು ಮೂಲಗಳು ತಿಳಿಸಿವೆ.
ವಿವಿಐಪಿ ವಿಶೇಷ ವಿಮಾನಗಳಿಗೆ ಯಾವುದೇ ದೇಶವಾಗಲಿ ತನ್ನ ವಾಯುಮಾರ್ಗ ಬಳಸಲು ಅನುಮತಿ ನೀಡುತ್ತದೆ. ಆದರೆ ಪಾಕಿಸ್ತಾನ ಇದರ ವಿರುದ್ಧ ನಿಲುವನ್ನು ತಾಳಿದ್ದು ದುರದೃಷ್ಟಕರ ಎಂದು ವರದಿ ಹೇಳಿದೆ.
ಮಾಧ್ಯಮ ವರದಿಗಳ ಪ್ರಕಾರ, ಪ್ರಧಾನಿ ನರೇಂದ್ರ ಮೋದಿ ಅವರು ಸೌದಿ ಅರೇಬಿಯಾಕ್ಕೆ ಇಂದು ತೆರಳುವ ನಿಟ್ಟಿನಲ್ಲಿ ದೇಶದ ವಾಯುಪ್ರದೇಶವನ್ನು ಬಳಸಲು ಭಾರತ ಪಾಕಿಸ್ತಾನದ ಅನುಮತಿ ಕೋರಿತ್ತು, ಆದರೆ ಪಾಕಿಸ್ತಾನ ಮೋದಿ ಅವರ ವಿಮಾನ ಹಾರಾಟಕ್ಕೆ ಅವಕಾಶ ನಿರಾಕರಿಸಿತ್ತು.
ಜೂನ್ನಲ್ಲಿ ಬಿಷ್ಕೆಕ್ ನಡೆದ ಶೃಂಗಸಭೆಯಲ್ಲಿ ಪಾಲ್ಗೊಳ್ಳಲು ಪ್ರಧಾನಿ ಮೋದಿ ವಾಯುಮಾರ್ಗ ಬಳಸಲು ಪಾಕಿಸ್ತಾನ ಅನುಮತಿ ನೀಡಿತ್ತು. ಆದರೆ, ಪಾಕಿಸ್ತಾನದ ವಾಯುಪ್ರದೇಶವನ್ನು ಬಳಸದಿರಲು ಭಾರತ ನಿರ್ಧರಿಸಿತು.