ಹುಬ್ಬಳ್ಳಿ, ಅ.29(Daijiworld News/SS): ಯಾವ ಸಮಾಜ, ಯಾರ ಹಿಂದೆ ಇರುತ್ತದೆ ಎಂಬುದು ಪ್ರಶ್ನೆಯಲ್ಲ. ಜನ ಯಾರ ಹಿಂದೆ ಇರುತ್ತಾರೆ ಎಂಬುದು ಮುಖ್ಯ ಎಂದು ಮಾಜಿ ಸಿಎಂ ಎಚ್.ಡಿ. ಕುಮಾರಸ್ವಾಮಿ ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸಿದ್ದರಾಮಯ್ಯ ಜಾತ್ಯತೀತ ನಾಯಕ ಎಂದು ಹೇಳಿಕೊಂಡು ಜಾತಿ ಹೆಸರಿನಲ್ಲಿ ಸಣ್ಣತನ ಮಾಡುತ್ತಾರೆ. ಯಾವ ಸಮಾಜ, ಯಾರ ಹಿಂದೆ ಇರುತ್ತದೆ ಎಂಬುದು ಪ್ರಶ್ನೆಯಲ್ಲ. ಜನ ಯಾರ ಹಿಂದೆ ಇರುತ್ತಾರೆ ಎಂಬುದು ಮುಖ್ಯ ಎಂದು ಹೇಳಿದರು.
ಸಚಿವ ಜಗದೀಶ ಶೆಟ್ಟರ್, ಸ್ವಾರ್ಥಕ್ಕಾಗಿ ನನ್ನನ್ನು ಉತ್ತರ ಕರ್ನಾಟಕ ವಿರೋಧಿ ಎಂದು ಬಿಂಬಿಸಿದರು. ಈಗ ನೆರೆ ಸಂತ್ರಸ್ತರಿಗೆ ಪರಿಹಾರ ಕೊಡಿಸುವಲ್ಲಿ ಏನು ಮಾಡುತ್ತಿದ್ದೀರಿ ಎಂದು ಜನತೆ ನೋಡುತ್ತಿದ್ದಾರೆ. ನಾನು ಹೇಳಿದರೂ ಒಂದೇ, ದೇವೇಗೌಡ್ರು ಹೇಳಿದರೂ ಒಂದೇ. ನಿಮಗೆ ಡಿಸೆಂಬರ್ 5ರ ನಂತರ ಮಾತನಾಡುತ್ತೇನೆ ಎಂದು ಕಿಡಿಕಾರಿದರು.
ನನ್ನ ಮೇಲೆ ಯಾರು ದೂರು ಕೊಡುತ್ತಾರೆ. ನನ್ನ ಬಳಿ ಆಸ್ತಿ ಏನಿದೆ, ಜನರೇ ನನ್ನ ಆಸ್ತಿ. ನನ್ನ ಮನೆ ಮೇಲೆ ಐಟಿ ದಾಳಿಯಾದರೂ ಮಾಡಲಿ, ಇಡಿ ದಾಳಿಯಾದರೂ ಮಾಡಲಿ. ನನ್ನ ಬಳಿ ಸಿಗೋದು ಬಿಜೆಪಿ ನಾಯಕರ ದಾಖಲೆಗಳು ಮಾತ್ರ. ಕುಮಾರಸ್ವಾಮಿಯನ್ನು ಯಾರು ಏನು ಮಾಡಲು ಸಾಧ್ಯವಿಲ್ಲ. ರಾಜ್ಯದಲ್ಲಿ ಕೆಲವರಿಗೆ ಸಾರ್ವತ್ರಿಕ ಚುನಾವಣೆಗೆ ಹೋಗುವ ಹಂಬಲವಿದೆ. ಆದರೆ ಇದು ಚುನಾವಣೆಗೆ ಹೋಗುವ ಸಮಯವೇ...? ಜನತೆ ನೆರೆಗೆ ತತ್ತರಿಸಿದ್ದು, ಇಂಥ ಸಮಯದಲ್ಲಿ ಅವರ ಬದುಕು ಉಳಿಸುವ ಬದಲು ಚೆಲ್ಲಾಟವಾಡಲು ಆಗುತ್ತಾ ಎಂದು ಪ್ರಶ್ನಿಸಿದರು.