ಬೆಂಗಳೂರು, ಅ.29(Daijiworld News/SS): ಸಿದ್ದರಾಮಯ್ಯ ನಮ್ಮ ಪಕ್ಷದ ಪ್ರಭಾವಿ ಮುಖಂಡ. ಹಾಗೆಯೇ ಡಿ.ಕೆ.ಶಿವಕುಮಾರ್ ಕೂಡಾ ನಮ್ಮ ಪಕ್ಷದ ನಾಯಕರು ಎಂದು ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಹೇಳಿದ್ದಾರೆ.
ತಿಹಾರ್ ಜೈಲಿನಿಂದ ಬಿಡುಗಡೆಯಾಗಿ ಬೆಂಗಳೂರಿಗೆ ಆಗಮಿಸುವ ಸಂದರ್ಭದಲ್ಲಿ ಮಾಜಿ ಸಚಿವ ಡಿ.ಕೆ.ಶಿವಕುಮಾರ್ ಕಾಂಗ್ರೆಸ್ ಹಾಗೂ ಜೆಡಿಎಸ್ ಧ್ವಜ ಹಿಡಿದುಕೊಂಡಿದ್ದರ ಬಗ್ಗೆ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ತಮ್ಮ ಆಪ್ತರ ಜತೆಗಿನ ಖಾಸಗಿ ಮಾತುಕತೆ ಸಂದರ್ಭದಲ್ಲಿ ಆಕ್ಷೇಪ ವ್ಯಕ್ತಪಡಿಸಿರುವ ವಿಡಿಯೊ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು ಭಾರಿ ವಿವಾದ ಸೃಷ್ಟಿಸಿದೆ.
ಇದೀಗ ವಿಡಿಯೊ ಸಮರ್ಥಿಸಿಕೊಂಡಿರುವ ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್, ಮಾಧ್ಯಮಗಳಲ್ಲಿ ಜಾತಿ ಲೆಕ್ಕಾಚಾರದ ಬಗ್ಗೆ ಚರ್ಚೆ ಆಗುವುದಿಲ್ಲವೇ ಎಂದು ಪ್ರಶ್ನಿಸಿದ್ದಾರೆ. ಸುದ್ದಿಗಾರರ ಜತೆ ಮಾತನಾಡಿದ ಅವರು, ಈ ಬಗ್ಗೆ ಕುಮಾರಸ್ವಾಮಿ ಹೇಳಿಕೆ ಬಗ್ಗೆ ನಾನು ಪ್ರತಿಕ್ರಿಯೆ ನೀಡುವುದಿಲ್ಲ. ಅವರು ಒಂದೊಂದು ಬಾರಿ ಒಂದೊಂದು ರೀತಿ ಮಾತನಾಡುತ್ತಾರೆ. ಸಿದ್ದರಾಮಯ್ಯ ಮಾತನಾಡಿದ್ದನ್ನು ಯಾರು ವಿಡಿಯೊ ಮಾಡಿದ್ದಾರೆ ಎಂಬುದೂ ಮುಖ್ಯ. ಕುಳಿತು ಮಾತನಾಡಿದ್ದನ್ನೇ ರೆಕಾರ್ಡ್ ಮಾಡಿದ್ದಾರೆ. ಸಿದ್ದರಾಮಯ್ಯ ನಮ್ಮ ಪಕ್ಷದ ಪ್ರಭಾವಿ ಮುಖಂಡ. ಹಾಗೆಯೇ ಡಿ.ಕೆ.ಶಿವಕುಮಾರ್ ಕೂಡಾ ನಮ್ಮ ಪಕ್ಷದ ನಾಯಕರು. ಕಾಂಗ್ರೆಸ್ ನಾಯಕರು ಒಗ್ಗೂಡದಂತೆ ಮಾಡಲು ಇಂಥ ಕೆಲಸಗಳು ನಡೆಯುತ್ತಿರುತ್ತವೆ ಎಂದು ಹೇಳಿದ್ದಾರೆ.
ಆಂತರಿಕ ವಿಚಾರಗಳು ಆಂತರಿಕವಾಗಿಯೇ ಇರಬೇಕು. ರಾಜಕಾರಣದಲ್ಲಿ ಜಾತಿ ಲೆಕ್ಕಾಚಾರ ಇರುತ್ತದೆ. ಮಾಧ್ಯಮದಲ್ಲಿ ಜಾತಿ ಲೆಕ್ಕಾಚಾರದ ಬಗ್ಗೆ ಚರ್ಚೆ ನಡೆಯುವುದಿಲ್ಲವೇ ಎಂದು ಪ್ರಶ್ನಿಸಿದ್ದಾರೆ.