ಪಲಕ್ಕಾಡ್ , ಅ.29(Daijiworld News/SS): ಕೇರಳದ ಪಾಲಕ್ಕಡ್ ಜಿಲ್ಲೆಯ ಮಂಜಕಟ್ಟಿ ಬೆಟ್ಟದಲ್ಲಿ ಓರ್ವ ಮಹಿಳೆ ಸೇರಿದಂತೆ ಮೂವರು ನಕ್ಸಲರು ಪೊಲೀಸ್ ಎನ್ಕೌಂಟರ್ಗೆ ಬಲಿಯಾಗಿದ್ದಾರೆ.
ಗುಂಡಿನ ದಾಳಿಯಲ್ಲಿ ಹತರಾದ ನಕ್ಸಲರನ್ನು ಕೇರಳದಲ್ಲಿ ಸಿಪಿಐ (ಮಾಕ್ರ್ಸಿಸ್ಟ್) ಪಕ್ಷದಡಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಭವಾನಿದಳಂ ತಂಡದ ಸದಸ್ಯರಾದ ಶ್ರೀಮತಿ, ಎ.ಎಸ್.ಸುರೇಶ್ ಹಾಗೂ ಕಾರ್ತಿ ಎಂದು ಗುರುತಿಸಲಾಗಿದೆ.
ಶೃಂಗೇರಿ ತಾಲೂಕಿನ ಬೆಳಗೋಡು ಕೂಡಿಗೆ ಗ್ರಾಮದ ಶ್ರೀಮತಿ 2008ರಿಂದ ನಕ್ಸಲ್ ಚಟುವಟಿಕೆಯಲ್ಲಿ ಭಾಗಿಯಾಗಿದ್ದಳು. ಈಕೆಯ ಮೇಲೆ ಸುಮಾರು 10 ರಿಂದ 12 ಕೇಸ್ಗಳಿವೆ. ಮತ್ತೊಬ್ಬ ನಕ್ಸಲ್ ಸುರೇಶ್ ಮೂಡಿಗೆರೆ ತಾಲೂಕಿನ ಅಂಗಡಿ ಗ್ರಾಮದವನು. ಈತ 2004 ರಿಂದ ನಕ್ಸಲ್ ಚಟುವಟಿಕೆಯಲ್ಲಿ ಭಾಗಿಯಾಗಿದ್ದ. ಈತನ ಮೇಲೆ ಸುಮಾರು 40 ಕೇಸ್ಗಳಿವೆ ಎನ್ನಲಾಗಿದೆ.
ಕೇರಳದ ಪಲಕ್ಕಾಡ್ ಜಿಲ್ಲೆಯ ಮಂಜಕಟ್ಟಿ ಎನ್ನುವ ಅರಣ್ಯ ಪ್ರದೇಶದಲ್ಲಿ ಪೊಲೀಸ್ ಎನ್ಕೌಂಟರ್ ನಡೆದಿದೆ. ನಕ್ಸಲರು ಇರುವಿಕೆ ಬಗ್ಗೆ ಮಾಹಿತಿ ಅರಿತ ಕೇರಳ ಪೊಲೀಸ್ ಇಲಾಖೆಯ ವಿಶೇಷ ಪಡೆ ಥಂಡರ್ ಬೋಲ್ಟ್ ತಂಡವು ನಕ್ಸಲರ ಬಂಧನಕ್ಕೆ ತೆರಳಿತ್ತು. ಇದೇ ವೇಳೆ ಥಂಡರ್ ಬೋಲ್ಟ್ ತಂಡದ ಮೇಲೆ ನಕ್ಸಲರು ದಾಳಿ ನಡೆಸಿತು. ಪ್ರತಿದಾಳಿ ನಡೆಸಿದ ಥಂಡರ್ ಬೋಲ್ಟ್ ತಂಡವು ಮೂವರನ್ನು ಹೊಡೆದುರುಳಿಸಿದೆ. ಈ ವೇಳೆ ಜತೆಗಿದ್ದ ನಾಲ್ವರು ನಕ್ಸಲರು ಪರಾರಿಯಾಗಿದ್ದಾರೆ.