ನವದೆಹಲಿ, ಅ.29(Daijiworld News/SS): ಮಹಿಳೆಯರ ಸುರಕ್ಷತೆಗಾಗಿ ಮಂಗಳವಾರದಿಂದ ದೆಹಲಿಯ ಎಲ್ಲಾ ಬಸ್ಗಳಲ್ಲಿ ಬಸ್ ಮಾರ್ಷಲ್ಗಳನ್ನು ನಿಯೋಜಿಸಲಾಗುವುದು. ಇದಕ್ಕಾಗಿ 13,000 ಬಸ್ ಮಾರ್ಷಲ್ಗಳನ್ನು ನೇಮಕ ಮಾಡಲಾಗಿದೆ ಎಂದು ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್ ಹೇಳಿದ್ದಾರೆ.
ಇಂದಿನಿಂದ ದೆಹಲಿ ಸಾರಿಗೆ ನಿಗಮ(ಡಿಟಿಸಿ) ಬಸ್ಸುಗಳು ಮತ್ತು ಕ್ಲಸ್ಟರ್ ಬಸ್ಗಳಲ್ಲಿ ಮಹಿಳೆಯರಿಗೆ ಉಚಿತ ಪ್ರಯಾಣ ಆರಂಭಗೊಂಡಿದ್ದು, ಕೇಜ್ರಿವಾಲ್ ಸರ್ಕಾರದ ಈ ಹೊಸ ಯೋಜನೆ ದೀಪಾವಳಿಗೆ ಮಹಿಳೆಯರಿಗೆ ಉಡುಗೊರೆ ನೀಡಿದಂತಾಗಿದೆ.
ಭಾಯ್ ಧೂಜ್ನಲ್ಲಿ ಪ್ರಾರಂಭವಾದ ಫ್ರೀ-ರೈಡ್ ಯೋಜನೆಯನ್ನು ಪಡೆಯಲು ಡಿಟಿಸಿ ಮತ್ತು ಕ್ಲಸ್ಟರ್ ಬಸ್ಗಳಲ್ಲಿ ಮಹಿಳೆಯರಿಗೆ ಗುಲಾಬಿ ಬಣ್ಣದ ಟಿಕೆಟ್ ನೀಡಲಾಗುವುದು. ಹೀಗೆ ವಿತರಿಸಲಾದ ಗುಲಾಬಿ ಟಿಕೆಟ್ ಆಧಾರದ ಮೇಲೆ ಸರ್ಕಾರ ಸಾರಿಗೆಗೆ ಟಿಕೆಟ್ ದರವನ್ನು ಮರುಪಾವತಿ ಮಾಡಲಿದೆ.
ದೆಹಲಿ ಬಸ್ಗಳಲ್ಲಿ ಮಹಿಳೆಯರಿಗೆ ಉಚಿತ ಸವಾರಿ ಇಂದಿನಿಂದ ಪ್ರಾರಂಭವಾಗಿದೆ. ಮಹಿಳಾ ಸುರಕ್ಷತೆಯ ಹೊರತಾಗಿ, ಇದು ದೆಹಲಿ ಆರ್ಥಿಕತೆಯಲ್ಲಿ ಮಹಿಳೆಯರ ಪಾತ್ರವನ್ನೂ ಹೆಚ್ಚಿಸುತ್ತದೆ ಎಂದು ಉಪಮುಖ್ಯಮಂತ್ರಿ ಸಿಸೋಡಿಯಾ ಹೇಳಿದ್ದಾರೆ.