ನವದೆಹಲಿ, ಅ.30(Daijiworld News/SS): ತೆರಿಗೆ ಹೊರೆಯನ್ನು ಇಳಿಸಲು ಪ್ರಧಾನಿ ನರೇಂದ್ರ ಮೋದಿ ಮತ್ತು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ರ್ಚಚಿಸಿ ನಿರ್ಧಾರ ಕೈಗೊಳ್ಳಲಿದ್ದಾರೆ ಎಂದು ಮೂಲಗಳು ತಿಳಿಸಿದೆ.
ಕುಸಿಯುತ್ತಿರುವ ಆರ್ಥಿಕತೆಯನ್ನು ಮೇಲೆತ್ತಲು ಕೇಂದ್ರ ಸರ್ಕಾರ ಮತ್ತೊಂದು ಸುತ್ತಿನ ಆರ್ಥಿಕ ಸುಧಾರಣಾ ಕ್ರಮಗಳನ್ನು ಘೋಷಿಸುವ ಸಾಧ್ಯತೆ ಇದೆ. ಅಧಿಕಾರಿಗಳು ಆರಂಭಿಕ ಕಾರ್ಯದಲ್ಲಿ ತೊಡಗಿದ್ದು, ಇದು ನವೆಂಬರ್ ಅಂತ್ಯದೊಳಗೆ ಮುಗಿಯುವ ಸಾಧ್ಯತೆ ಇದೆ. ಅಧಿಕಾರಿಗಳು ಸಿದ್ಧ ಪಡಿಸಿದ ಲೆಕ್ಕಾಚಾರವನ್ನು ಪ್ರಧಾನಿ ಮೋದಿ ಮತ್ತು ಸಚಿವೆ ನಿರ್ಮಲಾ ರ್ಚಚಿಸಿ ತೀರ್ಮಾನ ಕೈಗೊಳ್ಳಲಿದ್ದಾರೆ ಎನ್ನಲಾಗಿದೆ.
ದೀರ್ಘಾವಧಿಯ ಹೂಡಿಕೆ ಮೇಲಿನ ಲಾಭ, ಸೆಕ್ಯುರಿಟೀಸ್ ಟ್ರಾನ್ಸ್ಯಾಕ್ಷನ್ ಟ್ಯಾಕ್ಸ್, ಲಾಭಾಂಶ ಹಂಚಿಕೆ ತೆರಿಗೆಯನ್ನು ಯಾವ ವಿಧದಲ್ಲಿ ತಗ್ಗಿಸಬಹುದು ಎಂಬ ಬಗ್ಗೆ ಪ್ರಧಾನಮಂತ್ರಿ ಕಾರ್ಯಾಲಯವು ಹಣಕಾಸು ಸಚಿವಾಲಯದ ಅಧಿಕಾರಿಗಳ ಜತೆ ರ್ಚಚಿಸುತ್ತಿದೆ ಎಂದು ಹಣಕಾಸು ಸಚಿವಾಲಯ ಮತ್ತು ನೀತಿ ಆಯೋಗದ ಮೂಲಗಳು ತಿಳಿಸಿವೆ.
2020-21ರ ಆಯವ್ಯಯ ಫೆ. 3ರಂದು ಮಂಡನೆಯಾಗುವ ಸಾಧ್ಯತೆ ಇದ್ದು, ಅದಕ್ಕೂ ಮುಂಚೆಯೇ ತೆರಿಗೆ ಕಡಿತದ ನಿರ್ಧಾರ ಹೊರಬೀಳುವ ನಿರೀಕ್ಷೆ ಇದೆ ಎಂದು ಮೂಲಗಳು ಹೇಳಿವೆ. ಮಂದಗತಿಯಲ್ಲಿರು ಆರ್ಥಿಕತೆಗೆ ವೇಗ ನೀಡಲು ಕಳೆದ ಮೂರು ತಿಂಗಳಲ್ಲಿ ಸಚಿವೆ ನಿರ್ಮಲಾ ಅನೇಕ ಸುಧಾರಣಾ ಕ್ರಮಗಳನ್ನು ಘೋಷಣೆ ಮಾಡಿದ್ದಾರೆ.
ಕಾರ್ಪೆರೇಟ್ ತೆರಿಗೆ ಶೇ. 15 ಇಳಿಕೆ, ಸಾರ್ವಜನಿಕ ವಲಯದ 12 ಬ್ಯಾಂಕ್ಗಳನ್ನು ನಾಲ್ಕು ಬ್ಯಾಂಕ್ಗಳಾಗಿ ವಿಲೀನ ಮಾಡುವ ಘೋಷಣೆ, ನಷ್ಟದಲ್ಲಿರುವ ಸಾರ್ವಜನಿಕ ವಲಯದ ಉದ್ದಿಮೆಗಳ ಷೇರುವಿಕ್ರಯಕ್ಕೆ ನಿರ್ಧಾರ, ಬಾಕಿ ಇರುವ ಜಿಎಸ್ಟಿ ಮರುಪಾವತಿಯನ್ನು ಶೀಘ್ರದಲ್ಲಿ ನೀಡಲು ಸೂಚಿಸಲಾಗಿದೆ ಎನ್ನಲಾಗಿದೆ.