ಬೆಳಗಾವಿ, ಅ.30(Daijiworld News/SS): ಸರ್ಕಾರ ಬೀಳಿಸುವುದರಲ್ಲಿ ಯಾರು ನಿಪುಣರು ಎಂದು ಅವರವರ ಇತಿಹಾಸವೇ ಹೇಳುತ್ತದೆ ಎಂದು ವಿಧಾನಸಭೆಯ ವಿಪಕ್ಷ ನಾಯಕ ಸಿದ್ದರಾಮಯ್ಯ ಹೇಳಿದ್ದಾರೆ.
ಕುಮಾರಸ್ವಾಮಿಯವರಿಗೆ 14 ತಿಂಗಳು ನಾನು ಆಡಳಿತ ನಡೆಸಲು ಬಿಡಲಾಗದಷ್ಟು ತೊಂದರೆ ಕೊಟ್ಟಿದ್ದರೆ ಮೊದಲ ದಿನವೇ ಅವರು ರಾಜೀನಾಮೆ ಕೊಟ್ಟುಬಿಡಬಹುದಿತ್ತು. 14 ತಿಂಗಳು ಆಡಳಿತ ನಡೆಸಿ ಈಗ ರಾಜಕೀಯ ದುರುದ್ದೇಶಕ್ಕೆ ಇಲ್ಲಸಲ್ಲದ ಆರೋಪ ಮಾಡುವುದು ಸರಿಯಲ್ಲ. ಸರ್ಕಾರ ಬೀಳಿಸುವುದರಲ್ಲಿ ಯಾರು ನಿಪುಣರು ಎಂದು ಅವರವರ ಇತಿಹಾಸವೇ ಹೇಳುತ್ತದೆ ಎಂದು ಟೀಕಿಸಿದ್ದಾರೆ.
ಜೆಡಿಎಸ್ ಮುಖಂಡ ಎಚ್.ಡಿ.ಕುಮಾರಸ್ವಾಮಿ ಅವರು ಬಿಜೆಪಿ ಸರ್ಕಾರದ ಬಗ್ಗೆ ಮೃದು ಧೋರಣೆ ತೋರುತ್ತಿದ್ದಾರೆ. ಇದನ್ನು ಗಮನಿಸಿದರೆ ಕುಮಾರಸ್ವಾಮಿ ಹಾಗೂ ಸಿಎಂ ಬಿ.ಎಸ್.ಯಡಿಯೂರಪ್ಪ ಒಳ ಒಪ್ಪಂದ ಮಾಡಿಕೊಂಡಂತಿದೆ ಎಂದ ಅವರು, ಜೆಡಿಎಸ್ನ ಅನೇಕ ಶಾಸಕರು ಬಿಜೆಪಿ ಸೇರಲು ಮುಂದಾಗಿದ್ದಾರೆ. ಹೀಗಾಗಿ ಬಿಜೆಪಿ ಸರ್ಕಾರ ಬೀಳಲು ನಾನು ಬಿಡುವುದಿಲ್ಲ. ನಾವು ಬೆಂಬಲ ಕೊಡುತ್ತೇವೆ ಅಂತ ಹೇಳುತ್ತಿದ್ದಾರೆ. ಸರ್ಕಾರ ಬೀಳಿಸುವ ಅಭ್ಯಾಸ ಇರುವುದು ಜೆಡಿಎಸ್ ವರಿಷ್ಠ ಎಚ್.ಡಿ.ದೇವೇಗೌಡ ಅವರ ಕುಟುಂಬಕ್ಕೆ ಹೊರತು ನಮಗಲ್ಲ ಎಂದು ದೂರಿದರು.