ಶ್ರೀನಗರ, ಅ.30(Daijiworld News/SS): ಕಾಶ್ಮೀರದಲ್ಲಿನ ಪರಿಸ್ಥಿತಿ ಪರಾಮರ್ಶೆಗೆಂದು ಭಾರತಕ್ಕೆ ಬಂದಿರುವ ಐರೋಪ್ಯ ಒಕ್ಕೂಟದ ಸಂಸದರು ಶ್ರೀನಗರ ಮತ್ತು ಕಾಶ್ಮೀರ ಕಣಿವೆಯ ಹಲವು ಪ್ರದೇಶಗಳಿಗೆ ಭೇಟಿ ನೀಡಿದ ಬೆನ್ನಲ್ಲೇ ರಾಜ್ಯದಲ್ಲಿ ಹಿಂಸಾಚಾರ ಆರಂಭವಾಗಿದೆ.
ಕಣಿವೆ ರಾಜ್ಯದ ಹಲವೆಡೆ ಕಲ್ಲುತೂರಾಟ, ಘರ್ಷಣೆಗಳು ನಡೆದಿದ್ದು, ಉಗ್ರರಿಂದ ಗುಂಡಿನ ದಾಳಿಯಾದ ಘಟನೆಯೂ ನಡೆದಿದೆ. ರಾಜ್ಯದಲ್ಲಿ ತೆರೆದಿದ್ದ ಬೆರಳೆಣಿಕೆಯ ಅಂಗಡಿ ಮುಂಗಟ್ಟುಗಳು ಕೂಡ ಬಾಗಿಲು ಮುಚ್ಚಿದೆ. ಶ್ರೀನಗರ ಸೇರಿದಂತೆ ರಾಜ್ಯದ ಹಲವೆಡೆ ಪ್ರತಿಭಟನಾಕಾರರು ಮತ್ತು ಭದ್ರತಾಪಡೆಗಳ ನಡುವೆ ಘರ್ಷಣೆ ನಡೆದಿದ್ದು, ನಾಲ್ವರು ಗಾಯಗೊಂಡಿದ್ದಾರೆ. ಶ್ರೀನಗರದ 5 ಕಡೆ ಜನರು ರಸ್ತೆ ತಡೆ ನಡೆಸಿದ್ದಾರೆ. ಅಂಗಡಿ ಮುಂಗಟ್ಟುಗಳು ಮುಚ್ಚಿದ್ದು, ವಾಹನಗಳ ಸಂಚಾರವೂ ವಿರಳವಾಗಿದೆ ಎನ್ನಲಾಗಿದೆ.
ಅ.29ರಂದು ಐರೋಪ್ಯ ಒಕ್ಕೂಟದ 23 ಸಂಸದರನ್ನು ಭದ್ರತಾ ಪಡೆಗಳ ಬೆಂಗಾವಲು ಮೂಲಕ ಬುಲೆಟ್ ಪ್ರೂಫ್ ವಾಹನದಲ್ಲಿ ಕಣಿವೆ ರಾಜ್ಯಕ್ಕೆ ಕರೆದೊಯ್ಯಲಾಯಿತು. ಜಮ್ಮು- ಕಾಶ್ಮೀರದ ಮುಖ್ಯ ಕಾರ್ಯದರ್ಶಿ ಮತ್ತು ಪೊಲೀಸ್ ಮುಖ್ಯಸ್ಥರು ಈ ನಿಯೋಗಕ್ಕೆ ರಾಜ್ಯದ ಸ್ಥಿತಿ ಕುರಿತು ವಿವರಣೆ ನೀಡಿದರು. ಬಳಿಕ ತಂಡವು, ಹೊಸದಾಗಿ ಚುನಾಯಿತರಾದ ಪಂಜಾಯತ್ ಸದಸ್ಯರು, ಕೌನ್ಸಿಲರ್ಗಳು ಸೇರಿದಂತೆ ಸಾರ್ವಜನಿಕರನ್ನು ಭೇಟಿಯಾಗಿ ಮಾತುಕತೆ ನಡೆಸಿತು. ದಾಲ್ ಸರೋವರದಲ್ಲಿ ಸಂಸದರ ನಿಯೋಗವು ಬೋಟಿಂಗ್ ಕೂಡ ನಡೆಸಿತ್ತು. ಈ ಬೆನ್ನಲ್ಲೇ ರಾಜ್ಯದಲ್ಲಿ ಹಿಂಸಾಚಾರ ಆರಂಭವಾಗಿದೆ.