ಪಶ್ಚಿಮ ಬಂಗಾಳ, ಅ.30(Daijiworld News/SS): ಕಾಶ್ಮೀರದಲ್ಲಿ ಉಗ್ರರು ಪೈಶಾಚಿಕ ಕೃತ್ಯ ಮೆರೆದಿದ್ದು, ನಡೆದ ಕ್ರೂರ ಹತ್ಯೆಗಳ ಬಗ್ಗೆ ನಮಗೆ ಆಘಾತ ಮತ್ತು ದುಃಖವಾಗಿದೆ ಎಂದು ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ತಿಳಿಸಿದ್ದಾರೆ.
ಕಣಿವೆ ರಾಜ್ಯ ಜಮ್ಮು ಕಾಶ್ಮೀರದ ಕುಲ್ಗಾಂವ್ ಜಿಲ್ಲೆಯಲ್ಲಿ ನಡೆದ ಭಯೋತ್ಪಾದಕ ದಾಳಿಯಲ್ಲಿ ಮೃತಪಟ್ಟ ಮುರ್ಷಿದಾಬಾದ್'ನ ಐವರು ಕಾರ್ಮಿಕರ ಕುಟುಂಬಗಳಿಗೆ ಪಶ್ಚಿಮ ಬಂಗಾಳ ರಾಜ್ಯ ಸರ್ಕಾರ ಅಗತ್ಯವಿರುವ ಎಲ್ಲಾ ನೆರವನ್ನು ನೀಡಲಿದೆ ಎಂದು ತಿಳಿಸಿದ್ದಾರೆ.
ಮುರ್ಷಿದಾಬಾದ್'ನ ಐವರು ಕಾರ್ಮಿಕರು ಪ್ರಾಣ ಕಳೆದುಕೊಂಡಿದ್ದಾರೆ. ಸತ್ತವರ ಕುಟುಂಬಗಳ ದುಃಖವನ್ನು ಪದಗಳಲ್ಲಿ ಹೇಳಲಾಗುವುದಿಲ್ಲ. ಈ ದುರಂತ ಪರಿಸ್ಥಿತಿಯಲ್ಲಿ ಕುಟುಂಬಗಳಿಗೆ ಬೇಕಾದ ಎಲ್ಲಾ ಸಹಾಯವನ್ನು ನೀಡಲಾಗುವುದು ಎಂದು ಮಮತಾ ಬ್ಯಾನರ್ಜಿ ಭರವಸೆ ನೀಡಿದ್ದಾರೆ.
ಕಣಿವೆ ರಾಜ್ಯದಲ್ಲಿ ಉಗ್ರರ ಅಟ್ಟಹಾಸ ತೀರ ವಿಪರೀತಕ್ಕೆ ಹೋಗಿದೆ. ಜಮ್ಮು ಕಾಶ್ಮೀರದ ಕುಲ್ಗಾಮ್ ಜಿಲ್ಲೆಯಲ್ಲಿ ಉಗ್ರರ ದಾಳಿಗೆ 5 ಮಂದಿ ಕಾಶ್ಮೀರೇತರ ಕಾರ್ಮಿಕರು ಸಾವನ್ನಪ್ಪಿದ್ಧಾರೆ. ದಾಳಿಯಲ್ಲಿ ಓರ್ವ ಕಾರ್ಮಿಕ ಗಂಭೀರ ಗಾಯಗೊಂಡಿದ್ದಾನೆ. ಜಮ್ಮು ಕಾಶ್ಮೀರದಲ್ಲಿ ಆಗಸ್ಟ್ 5ರಂದು 370ನೇ ವಿಧಿಯನ್ನು ಕೇಂದ್ರ ಸರ್ಕಾರ ರದ್ದುಪಡಿಸಿತ್ತು. ಅಂದಿನಿಂದ ಉಗ್ರರು ಲಾರಿ ಚಾಲಕರು, ಕಾರ್ಮಿಕರು ಮತ್ತು ವ್ಯಾಪರಸ್ಥರನ್ನೇ ಗುರಿಯಾಗಿಸಿಕೊಂಡು ದಾಳಿ ಮಾಡುತ್ತಿದ್ದಾರೆ. ಅದರಲ್ಲೂ ಹೊರರಾಜ್ಯಗಳಿಂದ ಕಣಿವೆಗೆ ಬಂದಿರುವ ಕಾಶ್ಮೀರೇತರರ ಮೇಲೆ ದಾಳಿ ನಡೆಸುತ್ತಿದ್ದಾರೆ.