ಶ್ರೀನಗರ, ಅ.30(Daijiworld News/SS): ಜಮ್ಮು-ಕಾಶ್ಮೀರದ ಕುಪ್ವಾರ ಜಿಲ್ಲೆಯ ಮಚ್ಚಿಲ್ ವಲಯದಲ್ಲಿ ಗಡಿ ನಿಯಂತ್ರಣ ರೇಖೆಯಲ್ಲಿ ಪಾಕಿಸ್ತಾನ ಸೇನಾಪಡೆ ಗುಂಡಿನ ದಾಳಿ ಆರಂಭಿಸಿದ್ದು ಓರ್ವ ನಾಗರಿಕ ಮೃತಪಟ್ಟು ಉಳಿದ ಐವರು ಗಾಯಗೊಂಡಿದ್ದಾರೆ.
ಪದೇ ಪದೇ ಅಲ್ಲಿ ಗುಂಡಿನ ದಾಳಿ ನಡೆಯುತ್ತಿದ್ದು ಇದಕ್ಕೆ ಭಾರತೀಯ ಸೇನೆ ತಕ್ಕ ಪ್ರತ್ಯುತ್ತರ ನೀಡಿದೆ. ಗಾಯಗೊಂಡವರನ್ನು ತಕ್ಷಣವೇ ಆಸ್ಪತ್ರೆಗೆ ದಾಖಲಿಸಲಾಗಿದೆ ಎನ್ನಲಾಗಿದೆ.
ಕಣಿವೆ ರಾಜ್ಯದಲ್ಲಿ ಉಗ್ರರ ಅಟ್ಟಹಾಸ ತೀರ ವಿಪರೀತಕ್ಕೆ ಹೋಗಿದೆ. ಜಮ್ಮು ಕಾಶ್ಮೀರದ ಕುಲ್ಗಾಮ್ ಜಿಲ್ಲೆಯಲ್ಲಿ ಅ.29ರಂದು ನಡೆದ ಉಗ್ರರ ದಾಳಿಗೆ 5 ಮಂದಿ ಕಾಶ್ಮೀರೇತರ ಕಾರ್ಮಿಕರು ಸಾವನ್ನಪ್ಪಿದ್ಧಾರೆ. ದಾಳಿಯಲ್ಲಿ ಓರ್ವ ಕಾರ್ಮಿಕ ಗಂಭೀರ ಗಾಯಗೊಂಡಿದ್ದಾನೆ. ಜಮ್ಮು ಕಾಶ್ಮೀರದಲ್ಲಿ ಆಗಸ್ಟ್ 5ರಂದು 370ನೇ ವಿಧಿಯನ್ನು ಕೇಂದ್ರ ಸರ್ಕಾರ ರದ್ದುಪಡಿಸಿತ್ತು. ಅಂದಿನಿಂದ ಉಗ್ರರು ಲಾರಿ ಚಾಲಕರು, ಕಾರ್ಮಿಕರು ಮತ್ತು ವ್ಯಾಪರಸ್ಥರನ್ನೇ ಗುರಿಯಾಗಿಸಿಕೊಂಡು ದಾಳಿ ಮಾಡುತ್ತಿದ್ದಾರೆ. ಅದರಲ್ಲೂ ಹೊರರಾಜ್ಯಗಳಿಂದ ಕಣಿವೆಗೆ ಬಂದಿರುವ ಕಾಶ್ಮೀರೇತರರ ಮೇಲೆ ದಾಳಿ ನಡೆಸುತ್ತಿದ್ದಾರೆ.