ಬೆಂಗಳೂರು, ಅ 30 (DaijiworldNews/SM): ರಾಜ್ಯದಲ್ಲಿ ಅಧಿಕಾರಕ್ಕೆ ಬಂದಂತಹ ಸಂದರ್ಭದಲ್ಲೇ ಟಿಪ್ಪು ಜಯಂತಿಯನ್ನು ರದ್ದುಗೊಳಿಸಿದ್ದ ಬಿಜೆಪಿ ಸರಕಾರ ಇದೀಗ ಮತ್ತೊಂದು ನಿರ್ಧಾರಕೈಗೊಂಡಿದ್ದು, ಪಠ್ಯದಿಂದ ಮೈಸೂರು ಹುಲಿ ಟಿಪ್ಪು ಸುಲ್ತಾನ್ ಅಧ್ಯಾಯವನ್ನು ತೆಗೆದು ಹಾಕಲು ಮುಂದಾಗಿದೆ. ಇದರ ವಿರುದ್ಧ ಪರ ವಿರೋಧ ಚರ್ಚೆಗಳು ನಡೆಯುತ್ತಿವೆ. ಈ ನಡುವೆ ಅಧ್ಯಾಯವನ್ನು ತೆಗೆಯದಂತೆ ಮಾಜಿ ಸಿಎಂ ಕುಮಾರಸ್ವಾಮಿ ಆಗ್ರಹಿಸಿದ್ದಾರೆ.
ರಾಜ್ಯ ಸರಕಾರದ ನಿರ್ಧಾರವನ್ನು ಖಂಡಿಸಿರುವ ಅವರು, ರಾಜ್ಯ ಸರ್ಕಾರ ತಪ್ಪು ನಿರ್ಧಾರದಿಂದ ಹಿಂದೆ ಸರಿಯಬೇಕು ಎಂದು ಒತ್ತಾಯಿಸಿದ್ದಾರೆ. ಸ್ವಾತಂತ್ರ್ಯ ಹೋರಾಟಗಾರರ ಬಗ್ಗೆ ಉದಾಸೀನತೆ ತೋರುವುದು ಸರಿಯಲ್ಲ. ಟಿಪ್ಪು ಜಯಂತಿ ಆಚರಣೆಯನ್ನು ಕೈ ಬಿಡುತ್ತಿರುವುದು ಸೂಕ್ತವಾದ ನಿರ್ಧಾರವಲ್ಲ. ಟಿಪ್ಪು ಕುರಿತ ಶಾಲಾ ಪಠ್ಯವನ್ನು ತೆಗೆಯುತ್ತೇನೆ ಎನ್ನುವುದು ತಪ್ಪು ನಿರ್ಧಾರವಾಗಿದ್ದು, ಈ ಬಗ್ಗೆ ಸರ್ಕಾರ ಚಿಂತಿಸಬೇಕಿದೆ ಎಂದಿದ್ದಾರೆ.