ನವದೆಹಲಿ, ಅ.31(Daijiworld News/SS): ಹಿರಿಯ ಕಾಂಗ್ರೆಸ್ ನಾಯಕ ಪಿ.ಚಿದಂಬರಂ ಅವರ ನ್ಯಾಯಾಂಗ ಬಂಧನ ಅವಧಿಯನ್ನು ನವೆಂಬರ್ 13ರವರೆಗೆ ವಿಸ್ತರಿಸಿ ದೆಹಲಿ ಕೋರ್ಟ್ ಆದೇಶಿಸಿದೆ.
ಐಎನ್ ಎಕ್ಸ್ ಹಗರಣಕ್ಕೆ ಸಂಬಂಧಿಸಿದಂತೆ ಚಿದಂಬರಂ ಅವರನ್ನು ಕಳೆದ ಆಗಸ್ಟ್ 21ರಂದು ಸಿಬಿಐ ಅಧಿಕಾರಿಗಳು ಬಂಧಿಸಿದ್ದರು. ಬಳಿಕ ನ್ಯಾಯಾಲಯ ಅವರನ್ನು ನ್ಯಾಯಾಂಗ ಬಂಧನಕ್ಕೆ ಆದೇಶಿಸಿತ್ತು. ನಂತರ, ಜಾರಿ ನಿರ್ದೇಶನಾಲಯದ ಅಧಿಕಾರಿಗಳು (ಇಡಿ) ಅವರನ್ನು ವಿಚಾರಣೆಗಾಗಿ ವಶಕ್ಕೆ ಪಡೆದಿದ್ದರು.
ಇದೀಗ ಚಿದಂಬರಂ ಅವರನ್ನು ಇಡಿ ಅಧಿಕಾರಿಗಳು ವಿಶೇಷ ನ್ಯಾಯಾಧೀಶ ಅಜಯ್ ಕುಮಾರ್ ಕುಹರ್ ಅವರ ಮುಂದೆ ಹಾಜರುಪಡಿಸಿ, ಹೆಚ್ಚಿನ ವಿಚಾರಣೆಗಾಗಿ ಇನ್ನೂ ಒಂದು ದಿನ ತಮ್ಮ ವಶಕ್ಕೆ ನೀಡುವಂತೆ ಮನವಿ ಮಾಡಿದರು. ಇಡಿ ಅಧಿಕಾರಿಗಳ ಮನವಿಯನ್ನು ತಿರಸ್ಕರಿಸಿದ ನ್ಯಾಯಾಧೀಶರು, ಆರೋಪಿಯನ್ನು 14 ದಿನಗಳ ಕಾಲ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.
ಇನ್ನೂ ಇದೇ ವೇಳೆ ತಿಹಾರ್ ಜೈಲಿನಲ್ಲಿ ಚಿದಂಬರಂ ಅವರಿಗೆ ವೈದ್ಯಕೀಯ ಚಿಕಿತ್ಸೆ, ವೆಸ್ಟೆರ್ನ್ ಶೌಚಾಲಯ, ಸೂಕ್ತ ಭದ್ರತೆ ಮತ್ತು ಪ್ರತ್ಯೇಕ ಸೆಲ್ ನೀಡುವಂತೆ ಕೋರ್ಟ್, ತಿಹಾರ್ ಜೈಲಿನ ಅಧಿಕಾರಿಗಳಿಗೆ ಸೂಚಿಸಿದೆ. ಮಾತ್ರವಲ್ಲ, ಅನಾರೋಗ್ಯದ ಹಿನ್ನೆಲೆಯಲ್ಲಿ ಮಾಜಿ ಕೇಂದ್ರ ಸಚಿವರಿಗೆ ಮನೆಯಿಂದಲೇ ಊಟ ತರಿಸಿಕೊಳ್ಳಲು ಕೋರ್ಟ್ ಅನುಮತಿ ನೀಡಿದೆ.