ಬೆಂಗಳೂರು, ಅ.31(Daijiworld News/SS): ನಮ್ಮದು ಸ್ವಯಾರ್ಜಿತ ರಾಜಕೀಯ. ಅವರು ಯಾವಾಗ, ಯಾವ ಉದ್ದೇಶದ ದಾಳ ಉರುಳಿಸುತ್ತಾರೋ ಗೊತ್ತಿಲ್ಲ ಎಂದು ಪ್ರವಾಸೋದ್ಯಮ ಸಚಿವ ಸಿ.ಟಿ ರವಿ ಹೇಳಿದ್ದಾರೆ.
ಹೆಚ್'ಡಿಕೆ ಬಿಜೆಪಿಯತ್ತ ಒಲವು ತೋರಿರುವ ವಿಚಾರವಾಗಿ ಮಾತನಾಡಿದ ಅವರು, ಹೆಚ್ಡಿಕೆಯವರದ್ದು ಪಿತ್ರಾರ್ಜಿತ ರಾಜಕೀಯ. ನಮ್ಮದು ಸ್ವಯಾರ್ಜಿತ ರಾಜಕೀಯ. ಅವರು ಯಾವಾಗ, ಯಾವ ಉದ್ದೇಶದ ದಾಳ ಉರುಳಿಸುತ್ತಾರೋ ಗೊತ್ತಿಲ್ಲ. ಪಿತ್ರಾರ್ಜಿತ ರಾಜಕೀಯದಲ್ಲಿ ಎಲ್ಲೋ ದಾಳ ಇಟ್ಟುಕೊಂಡು ಎಲ್ಲಿ ಬೇಕಾದರೂ ದಾಳಿ ಉರುಳಿಸಬಹುದು. ಅವರು ಯಾವ ಉದ್ದೇಶದಿಂದ ಸರ್ಕಾರ ಬೀಳಲು ಬಿಡಲ್ಲ ಎಂದು ಹೇಳಿದ್ದಾರೋ ಅದರ ಹಿನ್ನೆಲೆ ಗೊತ್ತಿಲ್ಲ. ನಾವು ಕೂಡ ಅದರ ರಾಜಕೀಯ ಲಾಭ ಪಡೆಯುವ ಉತ್ಸುಕದಲಿದ್ದೇವೆ. ಹೀಗಾಗಿ ಆ ಬಗ್ಗೆ ಏನೂ ಹೇಳಲ್ಲ ಎಂದು ಹೇಳಿದರು.
ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷವೇ ಒಡೆದು ಆಳುವ ನೀತಿ ಪಾಲಿಸುತ್ತಿದೆ. 72 ವರ್ಷದಿಂದ ಆಚರಣೆ ಮಾಡಲಾಗದ ಟಿಪ್ಪು ಜಯಂತಿಯನ್ನು ಕಾಂಗ್ರೆಸ್ ರಾಜಕೀಯ ಉದ್ದೇಶಕ್ಕಾಗಿಯೇ ಜಾರಿಗೆ ತಂದಿದೆ. ಇಷ್ಟು ವರ್ಷಗಳ ಕಾಲ ನಾಡಧ್ವಜದ ಬಗ್ಗೆಯೂ ಇಲ್ಲದ ಕಾಳಜಿ ಚುನಾವಣೆಗೆ ಒಂದು ವರ್ಷವಿದ್ದಾಗ ವಿವಾದ ಸೃಷ್ಟಿ ಮಾಡಿದ್ದಾರೆ. ಅಲ್ಲದೆ ಕಾಂಗ್ರೆಸ್ ಲಿಂಗಾಯತ-ವೀರಶೈವ ವಿವಾದವನ್ನು ಚುನಾವಣಾ ವೇಳೆಯೇ ಶುರುಮಾಡಿದೆ. ಸಿದ್ದರಾಮಯ್ಯನವರೇ ಒಡೆದು ಆಳುವ ವಿಚಾರದಲ್ಲಿ ಕಿಂಗ್ ಆ್ಯಂಡ್ ಕಿಂಗ್ ಮೇಕರ್ ಎಂದು ದೂರಿದರು.