ಬೆಂಗಳೂರು, ನ.01(Daijiworld News/SS): ಗೋ ಶಾಲೆ ಮತ್ತು ಮೇವು ಬ್ಯಾಂಕ್ ಸ್ಥಾಪನೆ ಹಾಗೂ ನಿರ್ವಹಣೆಗಾಗಿ ರಾಜ್ಯದ ಎಲ್ಲ ತಾಲೂಕುಗಳಲ್ಲಿ ಪ್ರತ್ಯೇಕ ಗೋ ನೀತಿ ಜಾರಿಗೊಳಿಸಲು ಸಚಿವ ಸಂಪುಟ ಒಪ್ಪಿಗೆ ನೀಡಿದೆ. ರೈತರ ಮನೆ ಬಾಗಿಲಿಗೆ ದಿನಕ್ಕೆ ಕನಿಷ್ಠ 5 ಕೆಜಿಯಂತೆ ನಿಗದಿತ ಪ್ರಮಾಣದ ಮೇವನ್ನು ಕಾರ್ಡ್ ಮೂಲಕ ತಲುಪಿಸುವುದು ಇದರ ಉದ್ದೇಶ ಎನ್ನಲಾಗಿದೆ.
ಈ ಬಗ್ಗೆ ಮಾಹಿತಿ ನೀಡಿದ, ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಜೆ.ಸಿ.ಮಾಧುಸ್ವಾಮಿ, ಗೋಶಾಲೆ ಮತ್ತು ಮೇವು ಬ್ಯಾಂಕ್ ಸ್ಥಾಪನೆಯಾದ ಅನಂತರ ಅದರ ನಿರ್ವಹಣೆ ಹೇಗೆ ಮಾಡಬೇಕು, ಯಾರು ಮಾಡಬೇಕು, ಅವರ ಹೊಣೆಗಾರಿಕೆ ಮತ್ತು ಜವಾಬ್ದಾರಿಗಳೇನು ಎಂಬುದನ್ನು ನೀತಿಯು ಒಳಗೊಂಡಿರುತ್ತದೆ ಎಂದು ತಿಳಿಸಿದರು.
ಮಾತ್ರವಲ್ಲ, ಕೈಗಾರಿಕಾ ಉದ್ಯೋಗ ನೀತಿಗೆ ತಿದ್ದುಪಡಿ ತರಲು ರಾಜ್ಯ ಸರಕಾರ ನಿರ್ಧರಿಸಿದ್ದು, ಖಾಸಗಿ ಉದ್ಯಮಗಳಲ್ಲಿ ಸಿ ಮತ್ತು ಡಿ ವೃಂದದ ಹುದ್ದೆಗಳಲ್ಲಿ ಕನ್ನಡಿಗರಿಗೆ ಆದ್ಯತೆ ನೀಡುವ ಷರತ್ತು ವಿಧಿಸಲು ಸಂಪುಟ ಸಭೆ ತೀರ್ಮಾನಿಸಿದೆ.
ಜತೆಗೆ, ಟೆಕ್ಸ್ಟೈಲ್ ಮತ್ತು ಗಾರ್ಮೆಂಟ್ಸ್ ನೀತಿ (2019-2024 ) ಸಂಪುಟ ಒಪ್ಪಿಗೆ ನೀಡಿದ್ದು, ಕೆಲವು ವಿನಾಯಿತಿ-ರಿಯಾಯಿತಿ ಘೋಷಿಸಲಾಗಿದೆ. ಐದು ವರ್ಷಗಳಲ್ಲಿ 10 ಸಾವಿರ ಕೋಟಿ ರೂ. ಬಂಡವಾಳ ಹೂಡಿಕೆ, 5 ಲಕ್ಷ ಉದ್ಯೋಗ ಸೃಷ್ಟಿಯ ಗುರಿ ಹೊಂದಲಾಗಿದೆ.