ಬೆಂಗಳೂರು, ನ.01(Daijiworld News/SS): ಕನ್ನಡ ಧ್ವಜ ಹಾರಾಟ ಬೇಡ, ಕೇವಲ ರಾಷ್ಟ್ರಧ್ವಜವನ್ನಷ್ಟೇ ಹಾರಿಸಿ ಎಂಬ ರಾಜ್ಯ ಸರ್ಕಾರದ ಈ ಆದೇಶದ ವಿರುದ್ಧ ಕನ್ನಡ ಪರ ಸಂಘಟನೆಗಳು ಸೇರಿದಂತೆ ಸಾಮಾಜಿಕ ತಾಣಗಳಲ್ಲಿ ವ್ಯಾಪಕ ಆಕ್ರೋಶ ವ್ಯಕ್ತವಾಗಿದೆ.
ಈ ಬಗ್ಗೆ ಕಾಂಗ್ರೆಸ್ ನಾಯಕ, ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಮಾತನಾಡಿ, ಧ್ವಜ ಸಂಹಿತೆ ಹೆಸರಿನಲ್ಲಿ ಜನ ಮಾನಸದಲ್ಲಿ ದಶಕಗಳಿಂದ ನೆಲೆಯೂರಿದ ಕನ್ನಡದ ಅಸ್ಮಿತೆಯ ಪ್ರತಿಬಿಂಬವಾದ ನಾಡಧ್ವಜ ಹಾರಾಟಕ್ಕೆ ಅವಕಾಶ ನೀಡದೇ ಇರುವ ಮೂಲಕ ಬಿಜೆಪಿ ಸರ್ಕಾರ ಕನ್ನಡಿಗರ ಭಾವನೆಯೊಂದಿಗೆ ಚೆಲ್ಲಾಟವಾಡುತ್ತಿದೆ. ಕರ್ನಾಟಕದಲ್ಲಿ ನಾಡಧ್ವಜವಲ್ಲದೆ ಭಗವಾಧ್ವಜ ಹಾರಿಸಬೇಕೆ? ಎಂದು ಕಿಡಿ ಕಾರಿದ್ದಾರೆ.
ಕನ್ನಡ ರಾಜ್ಯೋತ್ಸವದಂದು ರಾಜ್ಯದ ಯಾವ ಭಾಗದಲ್ಲಿಯೂ ಕನ್ನಡ ಧ್ವಜ ಹಾರಾಟ ಬೇಡ, ಕೇವಲ ರಾಷ್ಟ್ರಧ್ವಜವನ್ನಷ್ಟೇ ಹಾರಿಸಿ ಎಂದು ರಾಜ್ಯದ ಎಲ್ಲಾ ಜಿಲ್ಲಾಧಿಕಾರಿಗಳಿಗೆ ಸರ್ಕಾರ ಕಡ್ಡಾಯ ಸೂಚನೆ ಹೊರಡಿಸಿದೆ.