ಶ್ರೀನಗರ, ನ.01(Daijiworld News/SS): ಜಮ್ಮು ಕಾಶ್ಮೀರದ ಕುಲ್ಗಾಂವ್'ನಲ್ಲಿ ಉಗ್ರರು ಮತ್ತೆ ಅಟ್ಟಹಾಸ ಮೆರೆದಿದ್ದು, ಬೋನಿಗಮ್ ಗ್ರಾಮದಲ್ಲಿ ಎರಡು ವಾಹನಗಳಿಗೆ ಬೆಂಕಿ ಹಚ್ಚಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.
ಕಳೆದ ಕೆಲ ದಿನಗಳ ಹಿಂದೆ ಕಾಶ್ಮೀರೇತರ ಐವರು ಕಾರ್ಮಿಕರನ್ನು ಕುಲ್ಗಾಂವ್'ನಲ್ಲಿ ಭಯೋತ್ಪಾದರು ಭೀಕರವಾಗಿ ಹತ್ಯೆ ಮಾಡಿದ್ದರು. ಅದರ ಜೊತೆಗೆ ಟ್ರಕ್ ಚಾಲಕರನ್ನು ಕೂಡ ಸರಣಿಯಾಗಿ ಗುಂಡಿಕ್ಕಿ ಕೊಂದಿದ್ದರು. ಇದೀಗ ಮತ್ತೆ ಉಗ್ರರು ಅಟ್ಟಹಾಸ ಮೆರೆದಿದ್ದಾರೆ.
ಕುಲ್ಗಾಂವ್ ಜಿಲ್ಲೆಯ ಬಿಜೆಪಿ ಪ್ರಧಾನ ಕಾರ್ಯದರ್ಶಿ ಅದಿಲ್ ಅಹಮದ್ ಗನಾಯ್ ಅವರಿಗೆ ಸೇರಿದ ವಾಹನಕ್ಕೆ ಉಗ್ರರು ಬೆಂಕಿ ಹಚ್ಚಿರುವ ಘಟನೆ ವರದಿಯಾಗಿದೆ. ಮನೆಯ ಹೊರಭಾಗ ಪಾರ್ಕಿಂಗ್ ಮಾಡಿದ್ದ ವೇಳೆ ಇಂದು ಮುಂಜಾನೆ 3 ಗಂಟೆಯ ವೇಳೆಗೆ ಉಗ್ರರು ಬೆಂಕಿ ಹಚ್ಚಿದ್ದಾರೆ. ಈ ವೇಳೆ ಅವರು ಮನೆಯಲ್ಲಿರಲಿಲ್ಲ ಎಂದು ತಿಳಿದುಬಂದಿದೆ.