ವಿಜಯಪುರ, ನ.01(Daijiworld News/SS): ವಿಜಯಪುರ-ಮಂಗಳೂರು ನಡುವೆ ವಿಶೇಷ ಎಕ್ಸ್ಪ್ರೆಸ್ ರೈಲನ್ನು ಆರಂಭಿಸಲಾಗುತ್ತಿದೆ. ಎಕ್ಸ್ಪ್ರೆಸ್ ರೈಲಿನ ವೇಳಾಪಟ್ಟಿ ಅಂತಿಮಗೊಂಡಿದ್ದು, ರೈಲು ಸಂಚಾರದ ದಿನಾಂಕ ಅಂತಿಮಗೊಳ್ಳಬೇಕಿದೆ ಎಂದು ನೈಋತ್ಯ ರೈಲ್ವೆ ಪ್ರತಿಕಾ ಪ್ರಕಟಣೆಯಲ್ಲಿ ತಿಳಿಸಿದೆ.
ವಿಜಯಪುರ-ಮಂಗಳೂರು ಜಂಕ್ಷನ್ ನಡುವೆ ರೈಲು ಸಂಖ್ಯೆ 06919/06920 ಪ್ರತಿದಿನ ಸಂಚಾರ ನಡೆಸಲಿದೆ. ಈ ರೈಲು ಒಟ್ಟು 21 ನಿಲ್ದಾಣಗಳಲ್ಲಿ ನಿಲುಗಡೆಗೊಳ್ಳಲಿದೆ. ಮೀಟರ್ ಗೇಜ್ ಕಾಲದಲ್ಲಿ ಹುಬ್ಬಳ್ಳಿ-ಮಂಗಳೂರು ನಡುವೆ ರೈಲು ಸಂಚಾರ ನಡೆಸುತ್ತಿತ್ತು. ಈ ರೈಲನ್ನು ಪುನಃ ಸ್ಥಾಪಿಸುವಂತೆ ಕೇಂದ್ರ ರೈಲ್ವೆ ಖಾತೆ ರಾಜ್ಯ ಸಚಿವ ಸುರೇಶ್ ಅಂಗಡಿಗೆ ಮನವಿ ಸಲ್ಲಿಸಲಾಗಿತ್ತು. ಈಗ ವೇಳಾಪಟ್ಟಿ ಅಂತಿಮಗೊಂಡಿದೆ ಎನ್ನಲಾಗಿದೆ.
ವಿಜಯಪುರದಿಂದ ಮಧ್ಯಾಹ್ನ 2 ಗಂಟೆಗೆ ಹೊರಡಲಿರುವ ರೈಲು ಮರುದಿನ ಮುಂಜಾನೆ 9.45ಕ್ಕೆ ಮಂಗಳೂರು ಜಂಕ್ಷನ್ ತಲುಪಲಿದೆ. ರೈಲು ಸಂಚಾರದ ದಿನಾಂಕ ಶೀಘ್ರದಲ್ಲಿಯೇ ಅಂತಿಮಗೊಳ್ಳಲಿದೆ. ವಿಜಯಪುರದಿಂದ ಹೊರಡುವ ರೈಲು ಬಸವನಬಾಗೇವಾಡಿ ರಸ್ತೆ, ಆಲಮಟ್ಟಿ, ಬಾಗಲಕೋಟೆ, ಗುಳೇದಗುಡ್ಡ, ಬಾದಾಮಿ, ಹೊಳೆ ಆಲೂರು, ಗದಗ, ಹುಬ್ಬಳ್ಳಿ, ರಾಣೆಬೆನ್ನೂರು, ಹರಿಹರ, ದಾವಣಗೆರೆ, ಕಡೂರು, ಅರಸೀಕೆರೆ, ಹಾಸನ, ಸಕಲೇಶಪುರ, ಸುಬ್ರಮಣ್ಯ ರೋಡ್, ಬಂಟ್ವಾಳ ಮೂಲಕ ಮಂಗಳೂರು ಜಂಕ್ಷನ್ ತಲುಪಲಿದೆ ಎಂದು ನೈಋತ್ಯ ರೈಲ್ವೆ ಪ್ರತಿಕಾ ಪ್ರಕಟಣೆಯಲ್ಲಿ ತಿಳಿಸಿದೆ.