ಮುಂಬೈ, ನ.01(Daijiworld News/SS): ಸರ್ಕಾರ ರಚನೆ ಬಗ್ಗೆ ಎರಡೂ ಪಕ್ಷಗಳ ಮಧ್ಯೆ ಯಾವುದೇ ಮಾತುಕತೆಗಳು ನಡೆದಿಲ್ಲ ಎಂದು ಶಿವಸೇನೆಯ ಹಿರಿಯ ನಾಯಕ ಸಂಜಯ್ ರಾವತ್ ಹೇಳಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸರ್ಕಾರ ರಚನೆಯಲ್ಲಿ ಬಿಜೆಪಿ ಮುಂದೆ ನಾವು ಯಾವುದೇ ದೊಡ್ಡ ಬೇಡಿಕೆಯನ್ನು ಮುಂದಿಟ್ಟಿಲ್ಲ. ಅವರ ಜೊತೆ ಮಾತುಕತೆಯೂ ನಡೆಸಿಲ್ಲ. ಅವರು ದೊಡ್ಡ ಮನುಷ್ಯರು. ಶಿವಸೇನೆ ತೀರ್ಮಾನಿಸಿದರೆ ಸ್ಥಿರ ಸರ್ಕಾರ ರಚಿಸಲು ಬೇಕಾದಷ್ಟು ಸದಸ್ಯರ ಬೆಂಬಲ ಸಿಗಲಿದ್ದು ಸರ್ಕಾರ ರಚಿಸಲು ಸಾಧ್ಯವಿದೆ ಎಂದು ಹೇಳಿದರು.
ಮಾತ್ರವಲ್ಲ, ಸರ್ಕಾರ ರಚನೆ ಬಗ್ಗೆ ಎರಡೂ ಪಕ್ಷಗಳ ಮಧ್ಯೆ ಯಾವುದೇ ಮಾತುಕತೆಗಳು ನಡೆದಿಲ್ಲ. ಶಿವಸೇನೆಯಿಂದ ಮಹಾರಾಷ್ಟ್ರ ಮುಖ್ಯಮಂತ್ರಿಯಾಗುತ್ತಾರೆ ಎಂದು ಭರವಸೆಯ ಹೇಳಿಕೆ ಕೊಟ್ಟಿದ್ದಾರೆ.
ಮುಖ್ಯಮಂತ್ರಿ ಹುದ್ದೆಯ ಅಧಿಕಾರ ಹಂಚಿಕೆ ವಿಷಯದಲ್ಲಿ ಬಿಜೆಪಿ ಜೊತೆ ಭಿನ್ನಮತ ಹೊಂದಿರುವ ಮೈತ್ರಿಪಕ್ಷ ಶಿವಸೇನೆ ಈ ಹೇಳಿಕೆ ನೀಡಿದ್ದು, ಶಿವಸೇನೆ ನಾಯಕರು ಮಹಾರಾಷ್ಟ್ರದ ಮುಖ್ಯಮಂತ್ರಿಯಾಗುತ್ತಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದೆ.