ನವದೆಹಲಿ, ನ.01(Daijiworld News/SS): ದೆಹಲಿಯಲ್ಲಿ ವಾಯುಮಾಲಿನ್ಯ ಮಟ್ಟ ದಿನೇದಿನೇ ಏರಿಕೆಯಾಗುತ್ತಿದ್ದು ಜನರಿಗೆ ಹೊರಗೆ ಓಡಾಡಲು ಕಷ್ಟವಾಗುತ್ತಿದೆ. ಇದನ್ನು ನಿಯಂತ್ರಿಸಲು ಮುಖ್ಯಮಂತ್ರಿಗಳು ಕ್ರಮ ಕೈಗೊಂಡಿಲ್ಲ ಎಂದು ಬಿಜೆಪಿ ಮತ್ತು ಕಾಂಗ್ರೆಸ್ ಕೇಜ್ರಿವಾಲ್ ಅವರನ್ನು ಟೀಕಿಸಿತ್ತು.
ಈ ಆರೋಪಕ್ಕೆ ಪ್ರತಿಕ್ರಿಯೆ ನೀಡಿರುವ ಮುಖ್ಯಮಂತ್ರಿ ಕೇಜ್ರಿವಾಲ್, ದೆಹಲಿ ಗ್ಯಾಸ್ ಚೇಂಬರ್ ಆಗಿದೆ. ಹರ್ಯಾಣದಲ್ಲಿ ಖಟ್ಟರ್ ಮತ್ತು ಪಂಜಾಬ್'ನಲ್ಲಿ ಕ್ಯಾಪ್ಟನ್ ಅಮರಿಂದರ್ ಸರ್ಕಾರಗಳು ರೈತರಿಗೆ ಕೊಯ್ದ ಪೈರಿನ ಕೂಳೆಯನ್ನು ಸುಡುವಂತೆ ಹೇಳುತ್ತವೆ. ಇದರಿಂದ ದೆಹಲಿಯಲ್ಲಿ ತೀವ್ರ ಮಾಲಿನ್ಯವುಂಟಾಗುತ್ತದೆ. ಈಗಾಗಲೇ ಪಂಜಾಬ್ ಮತ್ತು ಹರ್ಯಾಣ ಭವನಗಳಲ್ಲಿ ರೈತರು ಪ್ರತಿಭಟನೆ ನಡೆಸಿ ತಮ್ಮ ಸಿಟ್ಟು, ಆಕ್ರೋಶಗಳನ್ನು ಹೊರಹಾಕಿದ್ದಾರೆ ಎಂದು ಕೇಜ್ರಿವಾಲ್ ತಿಳಿಸಿದ್ದಾರೆ.
ಮಾತ್ರವಲ್ಲ, ದೆಹಲಿಯಲ್ಲಿ ಶಾಲಾ ಮಕ್ಕಳಿಗೆ ಉಸಿರಾಟದ ಮುಖವಾಡಗಳನ್ನು ವಿತರಿಸಿದ ಅವರು, ದೆಹಲಿಯಲ್ಲಿ ಮಾಲಿನ್ಯ ಹೆಚ್ಚಾಗುತ್ತಿದೆ. ಪಕ್ಕದ ರಾಜ್ಯಗಳಲ್ಲಿ ಬೆಳೆಗಳ ಕೂಳೆಗಳನ್ನು ಸುಡುವುದರಿಂದ ದೆಹಲಿಯಲ್ಲಿ ಇಷ್ಟೊಂದು ಹೊಗೆ, ಮಾಲಿನ್ಯವುಂಟಾಗಿದೆ. ಈ ವಿಷಕಾರಿ ಅನಿಲದಿಂದ ನಮ್ಮನ್ನು ನಾವು ರಕ್ಷಿಸಿಕೊಳ್ಳಬೇಕಾಗಿದೆ ಎಂದು ಹೇಳಿದರು.
ಖಾಸಗಿ ಮತ್ತು ಸರ್ಕಾರಿ ಶಾಲೆಗಳ ಮೂಲಕ ನಾವು ಇಂದು 50 ಲಕ್ಷ ಮಾಸ್ಕ್'ಗಳನ್ನು ಹಂಚಲು ಆರಂಭಿಸಿದ್ದೇವೆ. ಈ ಮಾಸ್ಕ್'ಗಳನ್ನು ಅಗತ್ಯವಿರುವ ಕಡೆಗಳಲ್ಲೆಲ್ಲಾ ಬಳಸಿ ಎಂದು ಹೇಳಿದ್ದಾರೆ.