ನವದೆಹಲಿ, ನ.02(Daijiworld News/SS): ಐಎನ್ಎಕ್ಸ್ ಮೀಡಿಯಾ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಬಿಐ ವಶದಲ್ಲಿರುವ ಮಾಜಿ ಕೇಂದ್ರ ಸಚಿವ ಪಿ ಚಿದಂಬಂರಂ ಈ ಹಿಂದೆ ಅನಾರೋಗ್ಯದ ಕಾರಣ ನೀಡಿ ಮಧ್ಯಂತರ ಜಾಮೀನು ನೀಡಬೇಕು ಎಂದು ಅರ್ಜಿ ಸಲ್ಲಿಸಿದ್ದರು. ಆದರೆ, ಸಿಬಿಐ ವಶದಲ್ಲಿರುವ ಮಾಜಿ ಕೇಂದ್ರ ಸಚಿವ ಪಿ ಚಿದಂಬರಂ ಅವರಿಗೆ ಮತ್ತೆ ಹಿನ್ನಡೆಯಾಗಿದ್ದು, ಅವರ ಆರೋಗ್ಯ ಕುರಿತ ಏಮ್ಸ್ ವೈದ್ಯರ ವರದಿ ಬೆನ್ನಲ್ಲೇ ದೆಹಲಿ ಹೈಕೋರ್ಟ್ ಜಾಮೀನು ಅರ್ಜಿ ವಜಾಗೊಳಿಸಿದೆ.
ದೆಹಲಿ ಹೈಕೋರ್ಟ್ ಚಿದಂಬರಂ ಆರೋಗ್ಯ ತಪಾಸಣೆಗಾಗಿ ದೆಹಲಿಯ ಏಮ್ಸ್ ವೈದ್ಯರ ಸಮಿತಿಯೊಂದನ್ನು ರಚಿಸಿ ತಪಾಸಣೆ ಮಾಡಿ ವರದಿ ನೀಡುವಂತೆ ಸೂಚಿಸಿತ್ತು. ಇದೀಗ ಚಿದಂಬರಂ ಅವರ ಆರೋಗ್ಯ ತಪಾಸಣೆ ಮಾಡಿರುವ ವೈದ್ಯರ ಸಮಿತಿ ದೆಹಲಿ ಹೈಕೋರ್ಟ್'ಗೆ ತಮ್ಮ ವರದಿ ನೀಡಿದ್ದು, ವರದಿಯಲ್ಲಿ ಚಿದಂಬಂರಂ ಅವರ ಆರೋಗ್ಯ ಸರಿ ಇದ್ದು, ಆಸ್ಪತ್ರೆಗೆ ದಾಖಲಿಸಬೇಕಾದ ಅಗತ್ಯವಿಲ್ಲ ಎಂದು ಹೇಳಿದೆ.
ಮಾತ್ರವಲ್ಲ, ಚಿದಂಬರಂ ಅವರ ಆರೋಗ್ಯದ ನಿಟ್ಟಿನಲ್ಲಿ ತಿಹಾರ್ ಜೈಲಿನಲ್ಲಿ ಅವರಿಗೆ ಮಿನರಲ್ ವಾಟರ್ ಮತ್ತು ಮನೆ ಊಟ ನೀಡುವಂತೆ ವೈದ್ಯರ ಸಮಿತಿ ಶಿಫಾರಸ್ಸು ಮಾಡಿದೆ ಎನ್ನಲಾಗಿದೆ. ಈ ವರದಿಯನ್ನು ಹೈಕೋರ್ಟ್'ಗೆ ರವಾನೆ ಮಾಡಲಾಗಿದ್ದು, ದೆಹಲಿ ಹೈಕೋರ್ಟ್ ಚಿದಂಬರಂ ಪರ ವಕೀಲರು ಸಲ್ಲಿಕೆ ಮಾಡಿದ್ದ ಮಧ್ಯಂತರ ಜಾಮೀನು ಅರ್ಜಿಯನ್ನು ವಜಾಗೊಳಿಸಿದ್ದಾರೆ.