ನವದೆಹಲಿ, ನ.02(Daijiworld News/SS): ಪತ್ರಕರ್ತರು, ವಕೀಲರು, ಕಾರ್ಯಕರ್ತರು ಮತ್ತು ರಾಜಕಾರಣಿಗಳ ಫೋನ್ಗಳನ್ನು ಹ್ಯಾಕ್ ಮಾಡಲು ಬಿಜೆಪಿ ಅಥವಾ ಕೇಂದ್ರ ಸರ್ಕಾರ ಇಸ್ರೇಲಿ ಏಜೆನ್ಸಿಗಳನ್ನು ತೊಡಗಿಸಿಕೊಂಡಿದ್ದೇ ಆದರೆ ಅದು ಮಾನವ ಹಕ್ಕುಗಳ ಸಂಪೂರ್ಣ ಉಲ್ಲಂಘನೆ ಮತ್ತು ರಾಷ್ಟ್ರೀಯ ಭದ್ರತೆಯ ಗಂಭೀರ ಹಗರಣವಾಗುತ್ತದೆ. ಈ ಬಗ್ಗೆ ಸರ್ಕಾರದ ಪ್ರತಿಕ್ರಿಯೆಗಾಗಿ ಕಾಯುತ್ತಿದ್ದೇವೆ ಎಂದು ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ ಹೇಳಿದ್ದಾರೆ.
ಪ್ರಮುಖ ಪತ್ರಕರ್ತರು, ರಾಜಕಾರಣಿಗಳು, ವಕೀಲರು, ಹಿರಿಯ ಸರ್ಕಾರಿ ಅಧಿಕಾರಿಗಳ ವಾಟ್ಸ್ಆಪ್ಗಳಿಂದ ಮಾಹಿತಿ ಕದಿಯಲು ಇಸ್ರೇಲಿ ಕಂಪನಿಯೊಂದು ಸ್ಪೈವೇರ್ ವೈರಸ್ ಕಳಿಸಿದ್ದ ಪ್ರಕರಣದಲ್ಲಿ ಅಚ್ಚರಿಯ ಮಾಹಿತಿ ಹೊರಬಿದ್ದಿದೆ. ಈ ವೈರಸ್ ಅತ್ಯಂತ ಅಪಾಯಕಾರಿಯಾಗಿದ್ದು, ಒಂದು ಮಿಸ್ಕಾಲ್ನಿಂದ ಮೊಬೈಲ್ಗೆ ವೈರಸ್ ಲಗ್ಗೆ ಇಡುತ್ತಿತ್ತು ಎಂದು ತಿಳಿದುಬಂದಿದೆ. ಕ್ಯಾಲಿಫೋರ್ನಿಯಾದ ಜಿಲ್ಲಾ ಕೋರ್ಟ್'ನಲ್ಲಿ ವಾಟ್ಸ್ಆಪ್ ಇಸ್ರೇಲ್ನ ಸೈಬರ್ ಭದ್ರತಾ ಸಂಸ್ಥೆ ಎನ್ಎಸ್ಒ ವಿರುದ್ಧ ದೂರು ನೀಡಿದ್ದು, ಇದರಲ್ಲಿ ಎನ್ಎಸ್ಒ ವೈರಸ್ ಎಷ್ಟು ಅಪಾಯಕಾರಿ ಹಾಗೂ ಮಾಹಿತಿ ಕದಿಯುವಲ್ಲಿ ಯಾವ ರೀತಿ ಕೆಲಸ ನಿರ್ವಹಿಸುತ್ತಿತ್ತು ಎಂಬುದನ್ನು ತಿಳಿಸಲಾಗಿದೆ.
ಇಸ್ರೇಲಿ ಕಂಪನಿಯ ಸ್ಪೈವೇರ್ ವಿಡಿಯೋ ಕಾಲಿಂಗ್ ಸೌಲಭ್ಯದ ಮೂಲಕ ಮೊಬೈಲ್ ಪ್ರವೇಶಿಸುತ್ತಿತ್ತು. ಬಳಿಕ ವೈರಸ್ ಮೊಬೈಲ್ಗೆ ಇನ್ಸ್ಟಾಲ್ ಆಗುತ್ತಿತ್ತು. ಬಳಕೆದಾರರು ವಿಡಿಯೋ ಕಾಲ್ ರಿಸೀವ್ ಮಾಡದಿದ್ದರೂ ಕೂಡ ರಹಸ್ಯ ಕೋಡ್ ಮೂಲಕ ವೈರಸ್ ತನ್ನ ಕೆಲಸ ಪ್ರಾರಂಭಿಸುತ್ತಿತ್ತು ಎನ್ನಲಾಗಿದೆ. ಇದೇ ರೀತಿ ವೈರಸ್ ಜಗತ್ತಿನ ಸುಮಾರು 1400 ಮೊಬೈಲ್ಗಳಲ್ಲಿ ಕಾರ್ಯನಿರ್ವಹಿಸಿದೆ. ಇಸ್ರೇಲಿ ಸ್ಪೈವೇರ್ನಿಂದಾಗಿ ವಾಟ್ಸ್ಆಪ್ಗೆ ಸುಮಾರು 54 ಲಕ್ಷ ರೂಪಾಯಿ ನಷ್ಟ ಸಂಭವಿಸಿದೆ ಎಂದು ಸಂಸ್ಥೆ ದೂರಿನಲ್ಲಿ ತಿಳಿಸಿದೆ.