ನವದೆಹಲಿ, ನ.02(Daijiworld News/SS): ಇತಿಹಾಸ ತಿರುಚುವುದು, ಸುಳ್ಳು ಹೇಳುವುದು, ಸುಳ್ಳು ಹೇಳಿ ಬಳಿಕ ಸ್ಟೇಟ್ವೆುಂಟ್ ಬದಲು ಮಾಡಿಕೊಳ್ಳುವುದು ಬಿಜೆಪಿಯ ಜನ್ಮಸಿದ್ಧ ಹಕ್ಕು ಎಂದು ಮಾಜಿ ಸಿಎಂ ಸಿದ್ದರಾಮಯ್ಯ ವ್ಯಂಗ್ಯವಾಡಿದರು.
ಪ್ರವಾಹದಿಂದ 2,47,628 ಮನೆ ಹಾನಿಯಾಗಿದೆ ಎಂದು ರಾಜ್ಯ ಸರ್ಕಾರ ಕೇಂದ್ರಕ್ಕೆ ವರದಿ ನೀಡಿದೆ. ಆದರೆ, ಪತ್ರಿಕೆಗಳಿಗೆ ನೀಡಿರುವ ಜಾಹೀರಾತಲ್ಲಿ 97,025 ಮನೆ ಬಿದ್ದಿದೆ ಎಂದಿದೆ. ಯಾವುದು ಸತ್ಯ? ಜಾಹೀರಾತು ನೀಡುವ ಮೂಲಕ ಕುಂಬಳಕಾಯಿ ಕಳ್ಳ ಅಂದ್ರೆ ಯಡಿಯೂರಪ್ಪ ಹೆಗಲು ಮುಟ್ಟಿ ನೋಡಿಕೊಂಡಿದ್ದಾರೆ ಎಂದು ಲೇವಡಿ ಮಾಡಿದರು.
‘ಸಂತ್ರಸ್ತರ ಬದುಕು ಮೂರಾಬಟ್ಟೆಯಾಗಿದೆ’, ‘ಆತಂಕದಲ್ಲಿ ಗ್ರಾಮ ಸ್ಥರು’, ‘ಇನ್ನೂ ಸಿಗದ ಪರಿಹಾರ’ ಎಂದು ಸುದ್ದಿಯನ್ನು ನಾನು ಬರೆದೆನೇ? ಈ ಬಗ್ಗೆ ಪತ್ರಿಕೆಗಳೇ ವಸ್ತುಸ್ಥಿತಿ ವರದಿ ಮಾಡಿವೆ. 24 ಲಕ್ಷ ಎಕರೆ ಬೆಳೆ ನಷ್ಟವಾಗಿದೆ. ಕೇಂದ್ರ ಈವರೆಗೆ ನಮ್ಮ ಕಡೆ ಧೂಪ ಹಾಕಿದಂತೆ ಪರಿಹಾರ ನೀಡಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಶಾಸಕರಿಂದ ರಾಜೀನಾಮೆ ಕೊಡಿಸಿದ್ದು, ಅನರ್ಹರ ಕ್ಷೇತ್ರಕ್ಕೆ ದುಡ್ಡು ಬಿಡುಗಡೆ ಮಾಡಿದ್ದು, ಕಾಂಗ್ರೆಸ್- ಜೆಡಿಎಸ್ ಶಾಸಕರ ಕ್ಷೇತ್ರಗಳಿಗೆ ಕೊಟ್ಟ ಅನುದಾನ ವಾಪಸ್ ತೆಗೆದುಕೊಂಡಿದ್ದು, ನೆರೆ ಪರಿಹಾರ ಕಲ್ಪಿಸುವಲ್ಲಿ ವಿಫಲವಾಗಿದ್ದು, ಹಿಗ್ಗಾಮುಗ್ಗಾ ವರ್ಗಾವಣೆ ಮಾಡಿದ್ದೇ ಬಿಜೆಪಿ ಸರ್ಕಾರದ ನೂರು ದಿನಗಳ ಸಾಧನೆ ಎಂದು ಲೇವಡಿ ಮಾಡಿದರು.