ನವದೆಹಲಿ, ನ 2 (Daijiworld News/MB): ವಾಟ್ಸ್ಆಪ್ ಮೂಲಕ ಸ್ಪೈವೇರನ್ನು ಬಳಸಿಕೊಂಡು ಪತ್ರಕರ್ತರು ಹಾಗೂ ಮಾನವಹಕ್ಕು ಹೋರಾಟಗಾರರ ಮೇಲೆ ಗೂಢಾಚಾರಿಕೆ ನಡೆಸಲಾಗುತ್ತಿದೆ ಎಂದು ಆಂಗ್ಲ ಸುದ್ದಿಜಾಲತಾಣವೊಂದು ಗುರುವಾರ ವರದಿ ಮಾಡಿದೆ. ಪತ್ರಕರ್ತರು ಹಾಗೂ ಮಾನವಹಕ್ಕುಗಳ ಹೋರಾಟಗಾರರನ್ನು ಒಳಗೊಂಡು ಒಟ್ಟು 24 ಜನರನ್ನು ಇಸ್ರೇಲಿನ ಎನ್ಎಸ್ಒ ಗ್ರೂಪ್ ಎಂಬ ಸಾಪ್ಟ್ವೇರ್ ಸಂಸ್ಥೆ ಅಭಿವೃದ್ಧಿ ಪಡಿಸಿದ ಪೆಗಾಸಸ್ ಎಂಬ ಸ್ಪೈವೇರನ್ನು ಬಳಸಿ ವಾಟ್ಸ್ಆಪ್ ಮೂಲಕ ಗೂಢಾಚಾರಿಕೆ ನಡೆಸಿದೆ ಎಂದು ಈ ವರದಿ ವಿವರಿಸಿದೆ.
ಪೋನಿನ ಬಳಕೆದಾರರು ‘ಎಕ್ಸ್ ಪ್ಲಾಯಿಟ್ ಲಿಂಕ್’ ಒತ್ತಿದಾಗ ಅಥವಾ ಮಿಸ್ಸ್ಡ್ ವಾಟ್ಸ್ಆಪ್ ಕರೆ ಮುಖಾಂತರ ಈ ಸ್ಪೈವೇರನ್ನು ತಾವು ಯಾರ ಮೊಬೈಲ್ ಫೋನ್ ಹ್ಯಾಕ್ ಮಾಡಬಹುದಾಗಿದೆ. ಈ ಮಾಲ್ ವೇರ್ ಮೂಲಕ ಪೋನಿನಲ್ಲಿರುವ ಕ್ಯಾಮರಾವನ್ನು ಗೂಢಾಚಾರರು ಬಳಸಬಹುದಾಗಿದೆ.
ವಾಟ್ಸ್ಆಪ್ ಮೂಲಕ ಕೇಂದ್ರ ಸರಕಾರ ಗೂಢಾಚಾರಿಕೆ ನಡೆಸುತ್ತಿದೆ ಎಂದು ಸುದ್ದಿ ಹರಡುತ್ತಿದ್ದಂತೆ ‘ವಾಟ್ಸ್ಆಪ್ ಮೂಲಕ ನಡೆಯುವ ಗೌಪ್ಯತೆ ಉಲ್ಲಂಘನೆ ಕುರಿತು ವಾಟ್ಸ್ಆಪ್ ಸಂಸ್ಥೆಗೆ ಉತ್ತರಿಸಲು ಹೇಳಿದ್ದೇವೆ. ಭಾರತದ ಜನರ ವೈಯಕ್ತಿಕ ವಿಷಯದ ಗೌಪ್ಯತೆಗೆ ಯಾವ ರಕ್ಷಣೆ ನೀಡುತ್ತೀರಿ ಎಂದು ಕೇಳಿದ್ದೇವೆ’ ಎಂದು ಕೇಂದ್ರ ಮಾಹಿತಿ ಹಾಗೂ ತಂತ್ರಜ್ಞಾನ ಸಚಿವ ರವಿ ಶಂಕರ್ ಪ್ರಸಾದ್ ಟ್ವಿಟ್ ಮಾಡಿದ್ದಾರೆ.
ಎನ್ಎಸ್ಓ ಗ್ರೂಪ್ ಸಾಪ್ಟ್ವೇರ್ ಸಂಸ್ಥೆ ಅಭಿವೃದ್ಧಿಪಡಿಸಿರುವ ಪೆಗಾಸಸ್ ಎಂಬ ಹೆಸರಿನ ಸ್ಪೈವೇರ್ ಉಪಯೋಗಿಸಿ ಪ್ರಪಂಚದಾದ್ಯಂತ ಹಲವು ದೇಶಗಳ ಸರ್ಕಾರಗಳು ತಮ್ಮ ವಿರೋಧಿಗಳು, ರಾಯಭಾರಿಗಳು, ಹಿರಿಯ ಅಧಿಕಾರಿಗಳು, ಪತ್ರಕರ್ತರ ವಿರುದ್ಧ ಗೂಢಾಚರ್ಯೆ ನಡೆಸುತ್ತಿರುವುದು ಈ ವರದಿಯ ಮೂಲಕ ಇನ್ನಷ್ಟು ಸ್ಪಷ್ಟವಾಗುತ್ತಿದೆ.