ಹುಬ್ಬಳ್ಳಿ, ನ 2 (Daijiworld News/MB): ನಾವು ಅಧಿಕಾರಕ್ಕೆ ಬಂದಿದ್ದು ಅನರ್ಹ ಶಾಸಕರಿಂದ. ಹೀಗಾಗಿ ಅವರ ಪರ ನಾವು ನಿಲ್ಲಬೇಕು ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಹೇಳಿದರು ಎನ್ನಲಾದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದ್ದು, ಇದು ರಾಜ್ಯ ರಾಜಕೀಯದಲ್ಲಿ ತಲ್ಲಣ ಸೃಷ್ಟಿಸಿದೆ.
ಈ ವಿಡಿಯೋವನ್ನು ಯೂತ್ ಕಾಂಗ್ರೆಸಿನ ಮುಖಂಡ ಶ್ರೀವತ್ಸ ಅವರಿಂದ ಸಾಮಾಜಿಕ ಜಾಲತಾಣದಲ್ಲಿ ಅಪ್ ಲೋಡ್ ಮಾಡಿದ್ದಾರೆ. ಈ ವಿಡಿಯೋ ಹುಬ್ಬಳ್ಳಿಯಲ್ಲಿ ನಡೆದ ಬಿಜೆಪಿ ಸಮಿತಿ ಸಭೆಯದ್ದಾಗಿದ್ದು, ಇದರಲ್ಲಿ ಧ್ವನಿ ಮಾತ್ರ ಕೇಳಿಸುತ್ತಿದ್ದು, ಯಡಿಯೂರಪ್ಪ ಅವರ ಮುಖ ಕಾಣಿಸುತ್ತಿಲ್ಲ.
ವಿಡಿಯೋದಲ್ಲಿ ಇರುವಂತೆ ‘ನಿಮಗೆ ಗೊತ್ತಿದೆ ತಾನೆ, 17 ಜನರ ತೀರ್ಮಾನ ಯಡಿಯೂರಪ್ಪ ಅಥವಾ ಇನ್ಯಾರೋ ಮುಖಂಡರು ತೆಗೆದುಕೊಂಡಿರುವಂತದ್ದಲ್ಲ. ಇದರಲ್ಲಿ ರಾಷ್ಟ್ರೀಯ ಅಧ್ಯಕ್ಷ ಶ್ರಮದಿಂದ ನಡೆದಿರುವಂಥದ್ದು, ಅತೃಪ್ತ ಶಾಸಕರು ಎರಡು ತಿಂಗಳುಗಳ ಕಾಲ ಮುಬೈನಲ್ಲಿ ಇರಿಸಲಾಯಿತು. ಮೂರು ತಿಂಗಳು ಅವರು ತಮ್ಮ ಹೆಂಡತಿ ಮಕ್ಕಳೊಂದಿಗೂ ಯಾವುದೇ ಸಂಪರ್ಕದಲ್ಲಿ ಇರಲಿಲ್ಲ. ಇದೆಲ್ಲಾ ನಿಮಗೆ ಗೊತ್ತಿದೆ ತಾನೆ. ನಾವು ಗೆಲ್ಲುವುದು ಸೋಲುವುದು ಬೇರೆ ವಿಷಯ. ಆದರೆ ನಾವು ಆಡಳಿತ ನಡೆಸಲು ಸಾಧ್ಯವಾಗಿದೆ ಅಲ್ಲವೆ?"
‘ವಿರೋಧ ಪಕ್ಷದಲ್ಲಿದ್ದ ನಮ್ಮನ್ನು ಆಡಳಿತ ನಡೆಸಲು ಅನುವು ಮಾಡಿ ಕೊಟ್ಟವರು ಅತೃಪ್ತ ಶಾಸಕರು. ಅವರ ಪರವಾಗಿ ನಿಂತುಕೊಳ್ಳುತ್ತೇವೆ ಎಂಬ ಮಾತು ನಿಮ್ಮ ಬಾಯಿಂದ ಬರಲಿಲ್ಲ. ನೀವು ಉಪದೇಶ ಮಾಡುತ್ತೀರಿ. ಆದರೆ ನೀವು ಅವರ ಜಾಗದಲ್ಲಿದ್ದಿದ್ದರೆ?’ ಎಂದು ಅತೃಪ್ತ ಶಾಸಕರ ಮೇಲೆ ಅಸಮಾಧಾನ ವ್ಯಕ್ತ ಪಡಿಸಿ ಯಡಿಯೂರಪ್ಪ ಪ್ರಶ್ನಿಸಿದ್ದಾರೆ.
‘ಈ ವಿಷಯ ಹೊರಗೆ ಗೊತ್ತಾಗುತ್ತದೆ. ನೀವೆ ಇಲ್ಲಿ ನಡೆದ ಸಭೆಯ ವಿಚಾರವನ್ನು ಹೊರಗೆ ಸುದ್ದಿ ಮಾಡುತ್ತೀರಿ ಎಂದು ನನಗೆ ನೂರಕ್ಕೆ ನೂರು ವಿಶ್ವಾಸವಿದೆ’ ಎಂದು ಆಡಿಯೋದಲ್ಲಿ ಕೇಳಿಬಂದಿದೆ
ಈ ವಿಡಿಯೋ ವೈರಲ್ ಆಗುತ್ತಿದ್ದಂತೆ ಕಾಂಗ್ರೆಸ್ ಮತ್ತು ಜೆಡಿಎಸ್ ಶಾಸಕರ ರಾಜೀನಾಮೆಗೂ ಪಕ್ಷಕ್ಕೂ ಯಾವುದೇ ಸಂಬಂಧವಿಲ್ಲ ಎಂದು ಬಿಜೆಪಿ ಸಮರ್ಥಿಸಿಕೊಂಡಿದೆ. ಬಿಜೆಪಿ ವಕ್ತಾರರು ಶುಕ್ರವಾರ ಬಿಡುಗಡೆ ಮಾಡಿದ ವಿಡಿಯೋ ಕುರಿತು ಪ್ರತಿಕ್ರಿಯಿಸಲು ನಿರಾಕರಿಸಿದ್ದಾರೆ.