ನವದೆಹಲಿ, ನ.02(Daijiworld News/SS): ಚಂದ್ರನ ದಕ್ಷಿಣ ಧ್ರುವದಲ್ಲಿ ವಿಕ್ರಮ ಲ್ಯಾಂಡರ್ ಅನ್ನು ಇಳಿಸುವ ಮತ್ತೊಂದು ಪ್ರಯತ್ನ ಖಂಡಿತವಾಗಿಯೂ ಮಾಡುತ್ತೇವೆ ಎಂದು ಇಸ್ರೋ ಮುಖ್ಯಸ್ಥ ಕೆ.ಶಿವನ್ ಹೇಳಿದ್ದಾರೆ.
ಚಂದ್ರಯಾನ -2 ಮುಗಿದ ಅಧ್ಯಾಯವಲ್ಲ ಎಂದಿರುವ ಇಸ್ರೋ ಮುಖ್ಯಸ್ಥ ಕೆ.ಶಿವನ್ ಅವರು, ನೀವು ಎಲ್ಲರೂ ಚಂದ್ರಯಾನ್ -2 ಮಿಷನ್ ಬಗ್ಗೆ ಕೇಳಿದ್ದೀರಿ. ತಂತ್ರಜ್ಞಾನದ ಭಾಗದಲ್ಲಿ ನಮಗೆ ಮೃದು ಇಳಿಯುವಿಕೆಯನ್ನು ಸಾಧಿಸಲು ಸಾಧ್ಯವಾಗಲಿಲ್ಲ. ಆದರೆ ಎಲ್ಲಾ ವ್ಯವಸ್ಥೆಗಳು ಚಂದ್ರನ ಮೇಲ್ಮೈಯಿಂದ 300 ಮೀಟರ್'ವರೆಗೆ ಕಾರ್ಯನಿರ್ವಹಿಸುತ್ತಿದ್ದವು. ಈಗ ವಿಷಯಗಳನ್ನು ಸರಿಯಾಗಿ ಹೊಂದಿಸಲು ಬಹಳ ಅಮೂಲ್ಯವಾದ ದತ್ತಾಂಶಗಳು ಲಭ್ಯವಿದೆ. ಮುಂದಿನ ದಿನಗಳಲ್ಲಿ ವಿಷಯಗಳನ್ನು ಸರಿಯಾಗಿ ಹೊಂದಿಸಲು ಮತ್ತು ಮೃದು ಇಳಿಯುವಿಕೆಯನ್ನು ಪ್ರದರ್ಶಿಸಲು ಇಸ್ರೋ ತನ್ನ ಎಲ್ಲ ಅನುಭವ, ಜ್ಞಾನ ಮತ್ತು ತಾಂತ್ರಿಕ ಪರಾಕ್ರಮವನ್ನು ಧಾರೆ ಎರೆಯಲಿದೆ ಎಂದು ತಿಳಿಸಿದರು.
ಚಂದ್ರನ ದಕ್ಷಿಣ ಧ್ರುವದಲ್ಲಿ ವಿಕ್ರಮ್ ಲ್ಯಾಂಡರನ್ನು ಮತ್ತೊಮ್ಮೆ ಖಚಿತವಾಗಿ ಇಳಿಸಲಾಗುವುದು. ವಿಕ್ರಮ್ ಲ್ಯಾಂಡರನ್ನು ಲ್ಯಾಂಡಿಂಗ್ ಮಾಡುವ ವಿಚಾರದಲ್ಲಿ ಟೆಕ್ನಾಲಜಿ ಬಳಕೆಯನ್ನು ಇನ್ನಷ್ಟು ಹರಿತಗೊಳಿಸಬೇಕಾಗಿದೆ. ಇದಕ್ಕೆ ಸಂಬಂಧಿಸಿದಂತೆ ನಮ್ಮ ಕೆಲಸವನ್ನು ನಾವು ಮುಂದುವರಿಸಿದ್ದೇವೆ. ಹೀಗಾಗಿ ಖಂಡಿತವಾಗಿ ಮುಂದಿನ ಪ್ರಯತ್ನದಲ್ಲಿ ಯಶಸ್ಸುಗಳಿಸಲಿದ್ದೇವೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.