ಬೆಂಗಳೂರು, ನ.02(Daijiworld News/SS): ಉಪ ಚುನಾವಣೆಯೇ ಆಗಲಿ, ಮಧ್ಯಂತರ ಚುನಾವಣೆಯೇ ಆಗಲಿ ಜೆಡಿಎಸ್ ಯಾರ ಜೊತೆಯೂ ಮೈತ್ರಿ ಮಾಡಿಕೊಳ್ಳುವುದಿಲ್ಲ. ಏಕಾಂಗಿಯಾಗೇ ಸ್ಪರ್ಧೆ ಮಾಡುತ್ತೆ. ಮಧ್ಯಂತರ ಚುನಾವಣೆ ಬಂದರೂ ಜೆಡಿಎಸ್ ಚುನಾವಣೆಗೆ ಸಜ್ಜಾಗಿದೆ ಎಂದು ಕುಮಾರಸ್ವಾಮಿ ಹೇಳಿದರು.
ಯಡಿಯೂರಪ್ಪ ಮುಖ್ಯ ಮಂತ್ರಿಯಾದರೆ ರಾಜ್ಯಕ್ಕೆ ಒಳ್ಳೆಯದಾಗುತ್ತದೆ ಎಂದು ಚರ್ಚೆ ಮಾಡಿದ್ದರು. ಆದರೆ, ಈಗ ಆಗಿದ್ದೇನು? ನೆರೆ ಸಂತ್ರಸ್ತರ ಗೋಳು ಕೇಳುವುದಕ್ಕೂ ಮುಖ್ಯಮಂತ್ರಿ ಬಳಿ ಸಮಯವಿಲ್ಲ ಎಂದು ವಾಗ್ದಾಳಿ ನಡೆಸಿದರು.
ಪ್ರವಾಹದಿಂದಾಗಿ ಉತ್ತರ ಕರ್ನಾಟಕ ಜನ ಬಹಳ ಕಷ್ಟದಲ್ಲಿ ಇದ್ದಾರೆ. ಹೀಗಾಗಿಯೇ ಮಧ್ಯಂತರ ಚುನಾವಣೆ ಬೇಡ ಎಂದು ಹೇಳಿದ್ದೇನೆ. ಬಿಜೆಪಿ ಸರ್ಕಾರ ಪತನಗೊಂಡು ಮಧ್ಯಂತರ ಚುನಾವಣೆ ನಡೆದರೂ ಯಾವ ಪಕ್ಷಕ್ಕೂ ಬಹುಮತ ಬರುವುದಿಲ್ಲ. ಹೀಗಾಗಿ ಮಧ್ಯಂತರ ಚುನಾವಣೆ ತಡೆಯುವುದಕ್ಕಾಗಿ ಸರ್ಕಾರವನ್ನು ಬೆಂಬಲಿಸುವುದಾಗಿ ಹೇಳಿದ್ದೇನೆ ಎಂದು ತಿಳಿಸಿದರು.
ನೆರೆಯಿಂದ ತತ್ತರಿಸಿರುವ ಜನರಿಗೆ ಸರ್ಕಾರ ನೆರವಾಗಲಿ ಎಂಬ ಕಾಳಜಿಯಿಂದ ಈ ಸರ್ಕಾರ ಮುಂದುವರೆಯಲಿ ಎಂಬ ಆಶಾಭಾವನೆ ವ್ಯಕ್ತಪಡಿಸಿದ್ದೇನೆ. ಬಿಜೆಪಿ ಸರ್ಕಾರದ ಬಗ್ಗೆ ನನಗೆ ಅನುಕಂಪ ಇಲ್ಲ ಮತ್ತು ಪ್ರೀತೀನೂ ಇಲ್ಲ. ಜನ ಸಂಕಷ್ಟದಲ್ಲಿರುವಾಗ ಚುನಾವಣೆ ನಡೆಸುವುದು ಬೇಡವೆಂದು ನನ್ನ ಅಭಿಪ್ರಾಯ ಎಂದು ಮಾಜಿ ಸಿಎಂ ಸ್ಪಷ್ಟಪಡಿಸಿದರು.