ಬೆಂಗಳೂರು, ನ 3 (Daijiworld/MB ): 'ನಾನು ಮುಖ್ಯಮಂತ್ರಿಯಾಗಿದ್ದಾಗ ನನಗೆ ನೆಮ್ಮದಿಯಿಂದ ಕೆಲಸ ಮಾಡಲು ಆಗಲಿಲ್ಲ. ನಾನು ಕಾಂಗ್ರೆಸ್ನ ಬೆಂಬಲಿತ ಮುಖ್ಯಮಂತ್ರಿಯಾಗಿದ್ದರಿಂದ ನನಗೆ ಯಾವುದೇ ತಿರ್ಮಾನವನ್ನು ಸ್ವತಂತ್ರವಾಗಿ ತೆಗೆದುಕೊಳ್ಳಲು ಸಾಧ್ಯವಾಗುತ್ತಿರಲಿಲ್ಲ. ನಾನು ಐದು ವರ್ಷ ಸ್ವತಂತ್ರ್ಯವಾಗಿ ಮುಖ್ಯಮಂತ್ರಿಯಾಗಿದ್ದರೆ ದೇಶವೆ ಕರ್ನಾಟಕದೆಡೆಗೆ ತಿರುಗಿ ನೋಡುವ ಹಾಗೆ ಮಾಡುತ್ತಿದ್ದೆ' ಎಂದು ಮಾಜಿ ಮುಖ್ಯಮಂತ್ರಿ ಹೆಚ್ಡಿ ಕುಮಾರಸ್ವಾಮಿ ಹೇಳಿದ್ದಾರೆ.
ದಾಸರಹಳ್ಳಿ ವಿಧಾನಸಭಾ ಕ್ಷೇತ್ರದ ಚಿಕ್ಕಸಂದ್ರದಲ್ಲಿ ನಡೆದ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಕೇಂದ್ರ ಸರಕಾರದ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ ಅವರು 'ಜಿಎಸ್ಟಿಯಿಂದಾಗಿ ದೇಶದ ಆರ್ಥಿಕ ಪರಿಸ್ಥಿತಿ ಸಂಕಷ್ಟದಲ್ಲಿದೆ. ಟೆಕ್ಸ್ಟ್ ಟೈಲ್ಸ್ ಇಂಡಸ್ಟ್ರಿಯ ಐದು ಲಕ್ಷ ಜನ ಉದ್ಯೋಗ ಕಳೆದುಕೊಂಡಿದ್ದಾರೆ. ಹಲವಾರು ಕಾರ್ಖಾನೆಗಳು ಆರ್ಥಿಕ ಬಿಕ್ಕಟ್ಟಿನ ಪರಿಸ್ಥಿತಿಯಲ್ಲಿದೆ. ಭ್ರಷ್ಟಚಾರ ತಡೆಗಟ್ಟಲು ನೋಟ್ ಬ್ಯಾನ್ ಮಾಡಿದರು.ಆದರೆ ಈಗ ಇರುವ 2000 ನೋಟು ಭ್ರಷ್ಟಾಚಾರಕ್ಕೆ ದಾರಿ ಮಾಡಿಕೊಡುತ್ತದೆ’ ಎಂದಿದ್ದಾರೆ.
'ಕುಮಾರಸ್ವಾಮಿ ಐಟಿ, ಇಡಿ, ಸಿಬಿಐಗೆ ಹೆದರಿದ್ದಾರೆ ಎಂದು ಹೇಳುತ್ತಾರೆ. ಆದರೆ, ನಾನು ಯಾರಿಗೂ ಹೆದರಿಲ್ಲ, ನನಗೆ ಅದರ ಭಯವಿಲ್ಲ. ಯಾರಿಂದಲೂ ಏನೂ ಮಾಡಲು ಸಾಧ್ಯವಿಲ್ಲ. ಅಧಿಕಾರಿಗಳು ನನ್ನ ಮನೆಗೆ ಬಂದರೆ ಮನೆಯಲ್ಲಿ ಏನೂ ಸಿಗುವುದಿಲ್ಲ. ಅವರನ್ನು ಬಿಜೆಪಿಯವರ ಮನೆಗೆ ಹೋಗಿ ಎಂದು ಹೇಳುತ್ತೇನೆಂದು' ಹೆಚ್ಡಿಕೆ ಖಡಕ್ ಆಗಿ ಹೇಳಿದ್ದಾರೆ.